ರಾಯಚೂರಿನ ಎಲ್‌ಬಿಎಸ್ ನಗರದ ಸರ್ಕಾರಿ ಪ್ರೌಢಶಾಲಾ ನಿರ್ಮಾಣಕ್ಕಾಗಿ ರಾಯಚೂರು ನಗರಾಭಿವೃಧ್ಧಿ ಪ್ರಾಧಿಕಾರವು (ಆರ್‌ಡಿಎ) ಶಿಕ್ಷಣ ಇಲಾಖೆಗೆ ನೀಡಿದ ಜಾಗವು ಒತ್ತುವರಿಯಾಗಿದೆ. ಭೂಕಬಳಿಕೆದಾರರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಬಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲೋನಿ ಪ್ರೌಢಶಾಲೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 384/1ರಲ್ಲಿ 5 ಎಕರೆ ಭೂಮಿಯಲ್ಲಿ ಶಿಕ್ಷಣ ಇಲಾಖೆಗೆ ನೀಡಿತ್ತು. 2017ರ ಎಪ್ರಿಲ್ 20ರಂದು 6,61 343 ರೂ.ಗಳನ್ನು ಆರ್‌ಡಿಎಗೆ ಶಿಕ್ಷಣ ಇಲಾಖೆ ಪಾವತಿಸಿ, ಆ ಭೂಮಿಯನ್ನು ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಆದರೆ, ಈಗ ಅದು ಭೂಕಬಳಿಕೆದಾರರ ಪಾಲಾಗಿದೆ.
ಶಿಕ್ಷಣ ಇಲಾಖೆಯು ಭೂಮಿಗೆ ಹದ್ದುಬಸ್ತು ಮಾಡದ ಕಾರಣ ಸಂತೋಷ ನಗರದ ನಿವಾಸಿಗಳಾದ ವೆಂಕಟೇಶ (ಅಯ್ಯ), ರಾಜು ಎಂಬುವವರು ಶಾಲಾ ಜಾಗವನ್ನು ದೇವರ ಹೆಸರಿನಲ್ಲಿ ಒತ್ತುವರಿ ಮಾಡಲು ಹುನ್ನಾರ ನಡೆಸಿದ್ದಾರೆ. ಇದೀಗ ಶಾಲೆಗಾಗಿ 6 ಕೊಠಡಿಗಳ ನಿರ್ಮಾಣಕ್ಕೆ ಇಲಾಖೆ ಮುಂದಾಗಿದ್ದು, ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ವಿರುದ್ಧ ಕ್ರಮಕ್ಕೆ ಜರುಗಿಸಿ, ಶಾಲೆಯ ಭೂಮಿಯನ್ನು ರಕ್ಷಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ 2023ರ ಎಪ್ರಿಲ್ 13ರಂದು ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ.
ಶಾಲೆ ಜಾಗದ ಒತ್ತುವರಿ ತೆರವಿಗಾಗಿ ಆಗಸ್ಟ್ 13ರಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ತುಕಾರಾಂ ಪಾಡ್ವೆ, ಸೆಪ್ಟಂಬರ್ 2ರಂದು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ಹಾಗೂ ಈಚೆಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ, ಈವರೆಗೆ ಒತ್ತುವರಿ ತೆರವು ಮಾಡಲಾಗಿಲ್ಲ. ಒತ್ತುವರಿ ಮಾಡಿಕೊಂಡಿರುವವರು ಆ ಜಾಗದಲ್ಲಿ ಕಟ್ಟಡ ನಿರ್ಮಿಸಿ, ದೇವರ ಮೂರ್ತಿ ಇಟ್ಟು, ಕೇಸರಿ ಧ್ವಜ ಹಾಕಿ, ಭೂಮಿಯನ್ನು ಕಬಳಿಸುತ್ತಿದ್ದಾರೆ.
ಆರ್‌ಡಿಎ ಆಯುಕ್ತರ ಆದೇಶ ಉಲ್ಲಂಘನೆ:
ಶಾಲೆಯ ಜಾಗ ಒತ್ತುವರಿ ತೆರವಿಗೆ ಕಳೆದ ಆಗಸ್ಟ್ 19ರಂದು ಆರ್‌ಡಿಎ ಆಯುಕ್ತರು ಆದೇಶ ಹೊರಡಿಸಿದ್ದರು. ಶಿಕ್ಷಣ ಇಲಾಖೆಯ ಜಾಗದಲ್ಲಿ ಫಲಕಗಳನ್ನು ಹಾಕಿ, ಒತ್ತುವರಿಯ ಜಾಗ ರಕ್ಷಣೆಗೆ ನಗರಸಭೆಯ ಕೌನ್ಸಿಲ್ ಸಭೆ ಕರೆದು ರಕ್ಷಣೆಗೆ ನಿರ್ಣಯ ಕೈಗೊಳ್ಳಬೇಕು, ಒತ್ತುವರಿ ತೆರವುಗೊಳಿಸಬೇಕು ಹಾಗೂ ಉದ್ದೇಶಿತ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ತಮ್ಮ ಆದೇಶದಲ್ಲಿ ವಿವರಿಸಿದ್ದರು. ಆದರೂ, ಅವರ ಆದೇಶ ಪಾಲನೆ ಆಗಿಲ್ಲ.
ಶಾಲೆ ಜಾಗ ಒತ್ತುವರಿ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ನರಸಿಂಹಲು, “ವೆಂಕಟೇಶ್ ಆಯ್ಯ ಹಾಗೂ ರಾಜು ಅವರು ತಮ್ಮ ಜಾಗದಲ್ಲಿ ಮನೆ ಕಟ್ಟುವಾಗ ಸ್ವಂತ ಮನೆ ಕಟ್ಟುವಾಗ ಶಾಲೆಯ ಭೂಮಿಯಲ್ಲಿ ಸಾಮಾಗ್ರಿಗಳನ್ನು ಇಟ್ಟುಕೊಳ್ಳಲು ತಾತ್ಕಾಲಿಕವಾಗಿ ಒಂದು ಕೋಣೆಯನ್ನು ಕಟ್ಟಿಕೊಂಡಿದ್ದರು. ಆದರೆ, ಆ ಬಗ್ಗೆ ಯಾರು ಕೇಳುವುದಿಲ್ಲವೆಂದು ಭಾವಿಸಿ, ಒತ್ತುವರಿಯನ್ನು ವಿಸ್ತರಣೆ ಮಾಡಿಕೊಳ್ಳೂತ್ತಿದ್ದಾರೆ. ಯಾರೂ ಪ್ರಶ್ನಿಸಬಾರದೆಂದು ಕೇಸರಿ ಧ್ವಜವನ್ನು ಕಟ್ಟಿ ದೇವರ ಜಾಗವೆಂದು ಬಿಂಬಿಸುವ ಹುನ್ನಾರ ನಡೆಸಿದ್ದಾರೆ. ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ, ಸುಸಜ್ಜಿತ ಶಾಲೆ ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸಾದೀಕ್ ಪಾಶಾ ಮಾತನಾಡಿ, “ಆಯುಕ್ತರ ಆದೇಶ ಪಾಲಿಸಬೇಕಾದ ನಗರಸಭೆಯ ಅಧಿಕಾರಿಗಳು ಕೇವಲ ಒಮ್ಮೆ ಸ್ಥಳ ಪರಿಶೀಲನೆ ಮಾಡಿ, ಕೈಬಿಟ್ಟಿದ್ದಾರೆ. ಒತ್ತುವರಿ ತೆರವಿಗೆ ಮುತುವರ್ಜಿ ವಹಿಸಿಲ್ಲ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ನಗರಸಭೆ, ಪೊಲೀಸ್ ಇಲಾಖೆ ಶಾಲೆಯ ಜಾಗ ಒತ್ತುವರಿ ತಡೆಯಲು ವಿಫಲರಾಗಿದ್ದು ಭೂಗಳ್ಳರ ಪಾಲಿಗೆ ವರದಾನವಾಗಿದೆ” ಎಂದು ಆರೋಪಿಸಿದ್ದಾರೆ.
ಶಿವು ಕುಮಾರ ಮ್ಯಾಗಳಮನಿ ವಕೀಲ ಅವರು ಮಾತನಾಡಿ, “ಶಾಲೆ ಭೂಮಿ ಒತ್ತುವರಿ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು ಮತ್ತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಹಲವಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಒತ್ತುವರಿದಾರರಿಗೆ ಕೆಲವು ರಾಜಕೀಯ ಕಾಣದ ಕೈಗಳು ಕೂಡ ಬೆಂಬಲವಾಗಿ ನಿಂತಿದ್ದಾರೆ” ಎಂದು ಆರೋಪಿಸಿದ್ದಾರೆ.
ನಿವೃತ ಶಿಕ್ಷಕ ರಂಗನಾಥ ಅವರು ಮಾತನಾಡಿ, “ಸರ್ಕಾರಿ ಶಾಲೆ ಉಳಿಸಬೇಕು ಅಂತ ಸರ್ಕಾರ ಕೋಟ್ಯಂತರ ರೂಪಾಯಿ ಮಂಜುರು ಮಾಡುತ್ತದೆ .ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಸರ್ಕಾರ ಶಾಲೆಗೆ ಮೀಸಲಿಟ್ಟ ಜಾಗವನ್ನು ಭೂಕಬಳಿಕೆದಾರರು ಕಣ್ಣು ಹಾಕಿದ್ದಾರೆ . ಅಧಿಕಾರಿಗಳಿಗೆ ಗಮನಕ್ಕೆ ಬಂದಾಗ ಅದನ್ನು ತಕ್ಷಣವೇ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ರಾಜಕೀಯ ನಾಯಕರು ಮುಂದೆ ಬರದೆ ಅದನ್ನು ಧಾರ್ಮಿಕ ವಿಷಯ ಅಲ್ಲಿ ಜಾತಿ ಧರ್ಮಗಳು ಬರುತ್ತವೆ ನಮ್ಮ ವೋಟ್ ಬ್ಯಾಂಕ್ ಬರಲ್ಲ ಎಂಬ ಅಜೆಂಡದಿಂದ ಕೆಲವರು ಬೆಂಬಲವಾಗಿ ಸಾತ್ ನೀಡಿದ್ದಾರೆ. ಕನ್ನಡ ಸರ್ಕಾರಿ ಶಾಲೆ ಜಾಗ ಉಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಜರುಗಿಸಬೇಕು” ಎಂದು ತಿಳಿಸಿದರು.