ದೇಶಕ್ಕೆ ಸ್ವಾತಂತ್ಯ್ರ ಬಂದು ಸುಮಾರು 76 ವರ್ಷ ಕಳೆದಿದೆ. ಆದರೆ, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಗ್ರಾಮವೊಂದಿದೆ. ಈ ಗ್ರಾಮಕ್ಕೆ ಈವರೆಗೆ ವಿದ್ಯುತ್ ಸಂಪರ್ಕವೇ ಸಿಕ್ಕಿಲ್ಲ ಎಂದರೆ, ನೀವು ನಂಬಲೇಬೆಕು. ಸಂಜೆಯಾದರೆ ಸಾಕು, ಈ ಪುಟ್ಟ ಹಳ್ಳಿಗೆ ಬೆಂಕಿಯೇ ಬೆಳಕು ಹಾಗೂ ಎಣ್ಣೆ ದೀಪಗಳೇ ಪರ್ಯಾಯ ಬೆಳಕಿನ ವ್ಯವಸ್ಥೆಯಾಗಿ ಮಾರ್ಪಟ್ಟಿದೆ.
ಹೌದು, ನಾವು ಹೇಳಲು ಹೊರಟಿರುವುದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನಾಯಕನ ದೊಡ್ಡಿ ಎಂಬ ಪ್ರದೇಶದ ಬಗ್ಗೆ.
ನಮ್ಮ ದೇಶ ಡಿಜಿಟಲ್ ಇಂಡಿಯಾ , ಮೇಕ್ ಇನ್ ಇಂಡಿಯಾ ಎಂದು ಮುಂದುವರೆಯುತ್ತಿದ್ದರೆ, ಲಿಂಗಸುಗೂರು ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನಾಯಕನ ದೊಡ್ಡಿಯಲ್ಲಿ ವಿದ್ಯುತ್ ಸಂಪರ್ಕವೇ ಇನ್ನೂ ಸಿಕ್ಕಿಲ್ಲ. ಹಳೆಯ ಕಾಲದ ಎಣ್ಣೆ ದೀಪವೆ ಈ ಗ್ರಾಮದ ನಿವಾಸಿಗಳಿಗೆ ಈಗಲೂ ಆಸರೆಯಾಗಿದೆ.
ಹೊನ್ನಳ್ಳಿ ಗ್ರಾಮದಿಂದ ರಾಮನಾಯಕ ದೊಡ್ಡಿಯು ಸುಮಾರು 4 ಕಿಲೋ ಮೀಟರ್ ದೂರಲ್ಲಿದೆ. ಇಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚು ಕುಟುಂಬ ಹಾಗೂ 200ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ. ಈ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಗ್ರಾಮಸ್ಥರು ಅಲೆಮಾರಿಗಳಂತೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಇಲ್ಲಿನ ಗ್ರಾಮಸ್ಥರಿಗೆ ರಾತ್ರಿ ವೇಳೆ ಭಯಾನಕ ಕ್ರಿಮಿಕೀಟಗಳ ಕಾಟದಿಂದ ಜೀವನ ದುಸ್ತರವಾಗಿ ಬಿಟ್ಟಿದೆ. ಗ್ರಾಮದಲ್ಲಿಯೇ ಅನೇಕ ಸಾವು ನೋವು ಅನಾಹುತಗಳು ಸಂಭವಿಸಿವೆ. ಸಂಜೆಯಾದರೆ, ಸಾಕು ಗ್ರಾಮಸ್ಥರು ಮೇಣದ ಬತ್ತಿ, ಎಣ್ಣೆ ದೀಪ ಹಾಗೂ ಕಟ್ಟಿಗೆಗಳನ್ನು ರಾಶಿ ಹಾಕಿ ಬೆಳಕಿಗಾಗಿ ‘ಬೆಂಕಿ’ಯ ಮೊರೆ ಹೋಗುತ್ತಾರೆ.
ಹಿಂದೆ ಮೇಣದ ಬತ್ತಿ ಬಳಕೆಗೆ ಸೀಮೆ ಎಣ್ಣೆ ಬಳಸುತ್ತಿದ್ದರು. ಸೀಮೆ ಎಣ್ಣೆ ಕೂಡ ಸಿಗದ ಕಾರಣಕ್ಕೆ ಮತ್ತಷ್ಟು ಜೀವನ ಅತಂತ್ರದಲ್ಲಿ ಸಿಲುಕಿಕೊಂಡಂತಾಗಿದ್ದು, ಇತ್ತೀಚಿಗೆ ಪೆಟ್ರೋಲ್, ಡೀಸೆಲ್ ಬಳಸಿ ದೀಪಗಳನ್ನು ಹಚ್ಚುತ್ತಿದ್ದೇವೆ ಎಂದು ಹೇಳುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಒಂದು ಕಡೆಯಾದರೆ, ಸರಿಯಾದ ಕುಡಿಯುವ ನೀರು ಕೂಡ ಇಲ್ಲ, ಕಾಲುವೆ ನೀರೇ ಇವರಿಗೆ ಸದ್ಯದ ಆಸರೆಯಾಗಿದೆ.
ಲಿಂಗಸುಗೂರು ತಾಲೂಕಿನಲ್ಲಿ ಕಲುಷಿತ ನೀರಿನಿಂದ ಅದೆಷ್ಟೋ ಜನ ಸಾವು ನೋವು ಅನುಭವಿಸಿದ್ದಾರೆ. ರಾಮನಾಯಕ ದೊಡ್ಡಿಯಲ್ಲಿ 200 ಜನ ವಾಸವಿದ್ದರೂ ಕೂಡ ಶಾಲೆ, ಅಂಗನವಾಡಿ ಸೇರಿದಂತೆ ಯಾವುದೇ ಸರಕಾರಿ ಕಟ್ಟಡವಿಲ್ಲ. ಇದರಿಮದಾಗಿ ಅದೆಷ್ಟೋ ಮಕ್ಕಳು, ಶಿಕ್ಷಣದಿಂದ ಕೂಡ ಅಂತರ ಕಾಯ್ದುಕೊಂಡಿದ್ದಾರೆ.

ಗ್ರಾಮದಿಂದ ಶಾಲೆಗೆ ತೆರಳ ಬೇಕಾದರೆ ಸುಮಾರು 4 ಕಿಲೋ ಮೀಟರ್ ದೂರವಿರುವ ಹೊನ್ನಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕಿದೆ. ಶಾಲೆಯಿಂದ ಗ್ರಾಮಕ್ಕೆ ತೆರಳ ಬೇಕಾದರೆ ಸಂಜೆಯ ಕತ್ತಲು ಆವರಿಸುತ್ತಿದೆ. ಮಕ್ಕಳು ವಿದ್ಯಾಭ್ಯಾಸ, ಹೋಮ್ ವರ್ಕ್ ಮಾಡಬೇಕಾದರೆ ವಿದ್ಯುತ್ ಇಲ್ಲದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿಂದೆ ಬೀಳುವಂತಾಗಿದೆ.
ಗ್ರಾಮದ ನಿವಾಸಿ ಬಸವರಾಜ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಸುಮಾರು ಮೂರು ತಲೆ ತಲಾಂತರದಿಂದ ವಿದ್ಯುತ್ ಇಲ್ಲದೆ ಬದುಕು ಸಾಗಿಸುತ್ತಿದ್ದೇವೆ. ಹಲವು ಬಾರಿ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಿಲ್ಲ. ಹಿಂದೆ ನಾಲ್ಕು ದಿನ ಧರಣಿ ಸತ್ಯಾಗ್ರಹ ಪ್ರತಿಭಟನೆ ಕೈಗೊಂಡರೂ ಕೂಡ ನಮ್ಮ ಬೇಡಿಕೆ ಈಡೇರಿಸಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಕಾಲುವೆ ನೀರು ಕುಡಿದು ಬದುಕುವಂತಾಗಿದೆ. ಗ್ರಾಮದ ಜನರು ಅನುಭವಿಸುತ್ತಿರುವ ಬವಣೆ ಹೇಳತೀರದ್ದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಇಲ್ಲದೆ ನೀರಿನ ಗುಮ್ಮಿಗೆ ಒಂದು ಹನಿಯೂ ನೀರು ನೋಡಿಲ್ಲ. ರಾಮನಾಯಕ ದೊಡ್ಡಿಗೆ ವಿದ್ಯುತ್, ರಸ್ತೆ, ಶಾಲೆ, ಅಂಗನವಾಡಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದ ಅವರು, “ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಗೆಲ್ಲಿಸಿ ಎಂದು ದೊಡ್ಡ ದೊಡ್ಡ ಭಾಷಣ ಬಿಗಿಯುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಒಂದು ಬಾರಿಯೂ ಕೂಡ ಗ್ರಾಮಕ್ಕೆ ಹಿಂತಿರುಗಿ ನೋಡಿಲ್ಲ” ಎಂದರು.
ಇದನ್ನು ಓದಿದ್ದೀರಾ? ಮೈಸೂರು | ಗ್ರಾಮೀಣ ಪ್ರಜ್ಞಾವಂತಿಕೆ ಮೂಡಿಸಿದ ಶ್ರೇಯಸ್ಸು ರೈತ ಸಂಘಟನೆಯದ್ದು: ಬಡಗಲಪುರ ನಾಗೇಂದ್ರ
ವಿದ್ಯುತ್ ಕಲ್ಪಿಸುವ ಬಗ್ಗೆ ಹಲವು ಬಾರಿ ಶಾಸಕರಿಗೆ, ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ. ‘ನಾವು ಅನುಭವಿಸಿದ್ದು ಸಾಕು, ನಮ್ಮ ಮಕ್ಕಳಿಗೆ ಆದರೂ ಒಳ್ಳೆಯ ಶಿಕ್ಷಣ ಆರೋಗ್ಯ ಸಿಗಲಿ’ ಎನ್ನುವುದು ನಮ್ಮ ಬಯಕೆ. ಸರಕಾರ ಹಾಗೂ ಸ್ಥಳೀಯ ಆಡಳಿತ ಹೀಗೆ ನಿರ್ಲಕ್ಷ್ಯ ವಹಿಸಿದರೆ ಹೋರಾಟಕ್ಕೂ ಸಿದ್ದರಾಗಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸದ್ಯ ರಾಮನಾಯಕ ದೊಡ್ಡಿಯು ಲೋಕಸಭಾ ಸದಸ್ಯರಾದ ಕಾಂಗ್ರೆಸ್‌ನ ಕುಮಾರ್ ನಾಯ್ಕ ಹಾಗೂ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ವ್ಯಾಪ್ತಿಯಲ್ಲಿದ್ದು, ಈ ಹಳ್ಳಿಯ ಸಮಸ್ಯೆಯ ಬಗ್ಗೆ ಕಣ್ಣಾಡಿಸುವ ಅವಶ್ಯಕತೆ ಇದೆ.
ಇನ್ನಾದರೂ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ರಾಮನಾಯಕ ದೊಡ್ಡಿಯ ಜನರ ಸಮಸ್ಯೆಗೆ ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.



ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್