ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ ತುಂಬ ನೋಟುಗಳು ತುಂಬಿವೆ ಎಂಬ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ₹500 ಮುಖಬೆಲೆಯ ನೋಟುಗಳ 62 ಬಂಡಲ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಅಬಕಾರಿ ಇಲಾಖೆ ಅಧಿಕಾರಿ ವಿಜಯಕುಮಾರ ಮತ್ತು ಅಬಕಾರಿ ಇನ್ಸ್‌ಪೆಕ್ಟರ್ ಪಾಂಡುರಂಗ ನೇತೃತ್ವವದ ತಂಡ ಅಕ್ರಮಮಧ್ಯ ಇರುವ ಮಾಹಿತಿ ಮೇಲೆ ಗೌಳಿಗಲ್ಲಿಯ ಚೋಟುಸಾಬ ಎಂಬುವವರ ಮನೆ ಮೇಲೆ ದಾಳಿ ನಡೆಸಿದಾಗ ಗೋಣಿ ಚೀಲದಲ್ಲಿ ತುಂಬಿರುವ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
₹500 ಮುಖಬೆಲೆಯ ಜ಼ೆರಾಕ್ಸ್ ನೋಟುಗಳು ಇರುವುದು ಪತ್ತೆಯಾಗಿದೆ. 62 ಬಂಡಲ್‌ಗಳಲ್ಲಿರುವ ನೋಟಿನ ಪರಿಶೀಲನೆ ನಡೆಸಲಾಗುತ್ತಿದೆ. ₹500ರ ಮುಖಬೆಲೆಯ ಜ಼ೆರಾಕ್ಸ್ ನೋಟುಗಳನ್ನು ಸಂಗ್ರಹಿಸಿಟ್ಟಿರುವ ಕುರಿತು ಹಲವಾರು ಸಂಶಯಗಳು ವ್ಯಕ್ತವಾಗುತ್ತಿವೆ. ಈಗಾಗಲೇ ನಕಲಿ ನೋಟಿನ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಬಂಡಲ್‌ಗಳನ್ನು ಚೀಲದಲ್ಲಿ ಸಂಗ್ರಹಿಸಿರುವುದು ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಹಿಂದಿನ ಉದ್ದೇಶ ತನಿಖೆಯ ಬಳಿಕ ಬಯಲಾಗಬೇಕಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ನೀಡಿರುವ ದೂರಿನ ಮೇರೆಗೆ ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪುಂಡಲೀಕ್ ಪಟತರ್ ತನಿಖೆ ಕೈಗೊಂಡಿದ್ದಾರೆ. ಗುರುವಾರ ರಾತ್ರಿ ನಡೆದ ದಾಳಿಯಲ್ಲಿ ಪತ್ತೆಯಾಗಿರುವ ಘಟನೆಯ ಕುರಿತಂತೆ ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಅವರಿಗೆ ಮಾಹಿತಿ ಒದಗಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಹಣ ಚಲಾವಣೆ ಮಾಡುವ ಉದ್ದೇಶ ಹೊಂದಿರುವ ಕುರಿತಂತೆ ಚುನಾವಣಾ ಹಾಗೂ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹಣದ ಮೂಲ ಹಾಗೂ ವ್ಯವಹಾರ ಕುರಿತಾಗಿ ಮಾಹಿತಿಗಳು ಲಭ್ಯವಾಗಬೇಕಿದೆ.
