ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆ ಜಾರಿಯಾಗಿದೆ. ಮನೆ ಯಜಮಾನಿಗೆ ಮಾಸಿಕ ₹2,000 ನೀಡುವ ಈ ಯೋಜನೆಗೆ ಆನ್ಲೈನ್ ಮೂಲಕ ಈಗಾಗಲೇ ನೋಂದಣಿ ಪ್ರತಿಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಕೆಗೆ ಯಾವುದೇ ಹಣ ಪಡೆಯುವಂತಿಲ್ಲ ಎಂದು ಸರ್ಕಾರವೇ ಹೇಳಿದೆ. ಆದರೂ ಖಾಸಗಿ ಸೈಬರ್ ಸೆಂಟರ್ಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿವೆ. ಅದರಂತೆ ರಾಯಚೂರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂರು ಸೈಬರ್ ಕೇಂದ್ರಗಳ ವಿರುದ್ಧ ದೂರು ದಾಖಲಾಗಿದೆ.
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಗ್ರಾಹಕರಿಂದ ₹100-₹200 ವಸೂಲಿ ಮಾಡುತ್ತಿದ್ದ ರಾಯಚೂರು ಜಿಲ್ಲೆ ಮಾನ್ವಿಯ 3 ಸೈಬರ್ ಕೇಂದ್ರಗಳ ವಿರುದ್ಧ ದೂರು ದಾಖಲಾಗಿದೆ. ಹಣ ವಸೂಲಿ ಮಾಡುತ್ತಿದ್ದ ಮಾಹಿತಿ ಮೇರೆಗೆ ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್ ಅವರು ಸೈಬರ್ ಸೆಂಟರ್‌ಗಳ ಮೇಲೆ ದಾಳಿ ಮಾಡಿದ್ದು, ಈ ವೇಳೆ ಅಧಿಕೃತ ಸರ್ಕಾರಿ ಐಡಿಯನ್ನು ಅಕ್ರಮವಾಗಿ ಪಡೆದು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅರ್ಜಿ ಸಲ್ಲಿಕೆ ಮಾಡುತ್ತಿರುವುದು ಪತ್ತೆಯಾಗಿದೆ.
ಲಕ್ಷ್ಮಿ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್, ಎಕ್ಸೆಲ್ ಕಂಪ್ಯೂಟರ್ ಸೆಂಟರ್ನಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಂದ್ರಕಾಂತ್ ಅವರು ನಗರದ ಮೂರು ಸೈಬರ್ ಸೆಂಟರ್‌ಗಳ ವಿರುದ್ಧ ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು, ಐಟಿ ಆಕ್ಟ್ ಹಾಗೂ ಐಪಿಸಿ ಸೆಕ್ಷನ್ 420 ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೃಹ ಲಕ್ಷ್ಮಿ | ಸೇವಾ ಕೇಂದ್ರಗಳಲ್ಲಿ ದುಡ್ಡು ಪಡೆದರೆ ಕ್ರಿಮಿನಲ್ ಕೇಸ್: ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರವಾಗಿ ಪರಿಗಣಿಸಿದ್ದು, “ಅರ್ಹ ಫಲಾನುಭವಿಗಳಿಂದ ಹಣ ಪಡೆದುಕೊಂಡರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಐಡಿ ಕ್ಯಾನ್ಸಲ್ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆಯ ನಡುವೆಯೂ ಖಾಸಗಿ ಸೈಬರ್ ಸೆಂಟರ್ಗಳು ಅಕ್ರಮವಾಗಿ ಐಡಿ ಪಡೆದು ಸಾರ್ವಜನಿಕರಿಂದ ಹಣ ವಸೂಲಿಗೆ ಇಳಿದಿರುವುದು ಕಂಡುಬಂದಿದೆ.