ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಿರುವ ಹಿನ್ನೆಲೆ ರೈತರಿಗೆ ಪ್ರೋತ್ಸಾಹಧನ ನೀಡಿ ಸರ್ಕಾರವೇ ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡಬೇಕು ಹಾಗೂ ಫಸಲ್ ಭೀಮಾ ಯೋಜನೆಯಡಿ ಆದ ಅಕ್ರಮದ ಬಗ್ಗೆ ತನಿಖೆ ಹಾಗೂ ನೈಜ ರೈತರ ಖಾತೆಗಳಿಗೆ ವಿಮೆ ಹಣ ಜಮಾ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷ ರಾಯಚೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ರೈತರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಹೋರಾಟ ಮಾಡುತ್ತಾ ಬಂದಿದ್ದರೂ, ಸಮಸ್ಯೆಗಳು ಮಾತ್ರ ಬಗೆಹರಿಯದೆ ಉಳಿದಿವೆ. ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಾರದೇ ಕಾಲುವೆ ವ್ಯಾಪ್ತಿಯ ಮಾನ್ವಿ ಮತ್ತು ಸಿರವಾರ ಸೇರಿದಂತೆ ಇತರೆ ಭಾಗದ ರೈತರು ಜಮೀನುಗಳಿಗೆ ನೀರಿಲ್ಲದೇ ಕಂಗಾಲಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು.
2023-24ನೇ ಸಾಲಿನ ಬರ ಪರಿಹಾರ ಸಂಪೂರ್ಣವಾಗಿ ರೈತರಿಗೆ ಸಿಗದೇ ಇರುವುದು, ಎಪಿಎಂಸಿಯಲ್ಲಿ ರೈತರಿಗೆ ದಿನನಿತ್ಯ ಮೋಸವಾಗುತ್ತಿರುವುದು, 2024-25ರ ಅತಿವೃಷ್ಟಿಗೆ ಪರಿಹಾರ ಬಾರದೇ ಇರುವುದು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು, ಫಸಲ್ ಭಿಮಾ ಯೋಜನೆಯಡಿ ರೈತರ ಖಾತೆಗೆ ಜಮಾ ಆಗಬೇಕಿದ್ದ ವಿಮೆ ಹಣ ಬೇರೆಯವರ ಖಾತೆಗೆ ಜಮೆಯಾಗಿರುವ ಬಗ್ಗೆ ಈಗಾಗಲೇ ಸಿರವಾರ, ಮಾನ್ವಿ ಹಾಗೂ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ನೈಜ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಮೈಕ್ರೋ ಫೈನಾನ್ಸ್ ಸಾಲ ವಿತರಣೆ ನೆಪದಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗುತ್ತಿದೆ. ಇದಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿವೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ತರಲು ಸಮಸ್ಯೆಯಾಗುತ್ತಿದೆ ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು. ತುಂಗಭದ್ರಾ ಎಡದಂಡೆ ನಾಲೆಯ ಮೈಲ್ 47, 69, 90 ಹಾಗೂ 104 ರಲ್ಲಿ ನಿಗಧಿತ ಗೇಜ್ ಕಾಯ್ದುಕೊಂಡು ಏಪ್ರಿಲ್ 10 ರವರೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕೂಲಿ ಕಾರ್ಮಿಕರ ಅಹೋರಾತ್ರಿ ಗಣರಾಜೋತ್ಸವ
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಜಿಲ್ಲಾಧ್ಯಕ್ಷ ಜಾನ್‌ವೆಸ್ಲಿ, ಪ್ರಮುಖರಾದ ಪ್ರಭಾಕರ್ ಪಾಟೀಲ್, ವೀರೇಶ ಪಾಟೀಲ್, ಬೂದಯ್ಯ ಸ್ವಾಮಿ, ದೇವರಾಜ್ ನಾಯಕ, ನಿಂಗಪ್ಪ, ಹಾಜಿ ಮಸ್ತಾನ್, ಶಂಕ್ರಪ್ಪಗೌಡ, ಬಸನಗೌಡ ಮಾಲೀಪಾಟೀಲ್, ಯಂಕಪ್ಪ ಕಾರೋಬಾರಿ, ಸೂಗಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.
