ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ನಡೆದಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ವಿಶ್ವಾಸ ಘಾತವಾದಲ್ಲಿ ಬಹುದೊಡ್ಡ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎದ್ದೇಳು ಕರ್ನಾಟಕ ಸಂಘಟನೆ ಸಂಚಾಲಕ ಮಾರೆಪ್ಪ ಹರವಿ ಎಚ್ಚರಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಬಿಜೆಪಿ ಸರ್ಕಾರ ಜನವಿರೋಧಿ, ಕೋಮುದ್ವೇಷವನ್ನು ವಿರೋಧಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಸಂಘಟನೆಗಳು ಒಗ್ಗೂಡಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದವು. ಆದರೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತು ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ರೈತ ವಿರೋಧಿಯಾದ ಮೂರು ಮಾರಕ ಕಾಯ್ದೆಗಳ ರದ್ದು, ಪರಿಶಿಷ್ಟ ಜಾತಿಗಳಿಗೆ ಒಳಮೀಸ ಲಾತಿ ಹಾಗೂ ರೈತರ ವಿರೋಧಿಯಾದ ಭೂ ಸ್ವಾಧೀನ ಕಾಯ್ದೆ ಜಾರಿ ತಡೆಯುವ ಭರವಸೆಯನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಹತ್ತಾರು ಸಂಘಟನೆಗಳು ಕಾಂಗ್ರೆಸ್ ಪಕ್ಷ ಗೆಲುವಿಗೆ ಶ್ರಮಿಸಲಾಗಿದೆ. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಿದ್ದರೂ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದರು.
ಗ್ಯಾರಂಟಿ ಯೋಜನೆ ಬಿಟ್ಟರೆ ರೈತರು, ಮಹಿಳೆಯರು ಪರಿಶಿಷ್ಟ ಸಮೂದಾಯಗಳ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ನಿರಂತರ ಹೋರಾಟ ನಡೆಸಲಾಗಿದೆ. ನಾಳೆ ಮತ್ತೊಂದು ಸಭೆ ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ರೈತರ ಪರ ನಿಲುವು ತೆಗೆದುಕೊಳ್ಳುವ ವಿಶ್ವಾಸವಿದೆ. ರೈತರ ಹಿತಾಸಕ್ತಿ ಕಡೆಗಣಿಸಿ ಖಾಸಗಿ ಕಂಪನಿಗಳ ಹಿತಕ್ಕೆ ಮುಂದಾದರೆ ಸರ್ಕಾರ ವಿರುದ್ದ ಸಂಘಟನೆಗಳು ಹೋರಾಟ ನಡೆಸುವದಾಗಿ ಹೇಳಿದರು.
ಹೋರಾಟಗಾರ ಎಂ.ಆರ್.ಭೇರಿ ಮಾತನಾಡಿ ದೇವರಾಜ ಅರಸುರಂತೆ ಅವಧಿ ಪೂರ್ಣ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದಾಗಿ ಹೇಳುವ ಸಿದ್ದರಾಮಯ್ಯನವರು ಉಳುವವನೇ ಭೂ ಒಡೆಯ ಎಂಬ ನಿರ್ಣಯ ತೆಗೆದುಕೊಂಡ ಅರಸುರ ನಿರ್ಧಾರದಂತೆ ದೇವನಹಳ್ಳಿ ರೈತರ ಹಿತಕಾಪಾಡಬೇಕು. ಅಧಿಕಾರಕ್ಕೆ ಬರುತ್ತಲೆ ಕೊಟ್ಟ ಮಾತು ತಪ್ಪಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿಗೆ ಆಗಿರುವ ಶಾಸ್ತಿಯಾಗುತ್ತದೆ. ಮುಖ್ಯಮಂತ್ರಿಗಳು ದೇವನಹಳ್ಳಿ ರೈತರ ಹಿತಕ್ಕೆ ಮುಂದಾಗಬೇಕಿದೆ. ಭೂ ಹೋರಾಟವನ್ನು ಒಡೆಯುವ ಕೆಲಸ ಸರ್ಕಾರ ಮಾಡುತ್ತಿದೆ ಭೂ ಒಡೆಯರಾಗಿರುವ ಕೆಲವರು ಭೂಮಿ ನೀಡುವದಾಗಿ ಮುಂದೆ ಬಂದಿದ್ದಾರೆ. ಬಹುಸಂಖ್ಯಾತ ರೈತರು ಭೂಮಿ ನೀಡಲು ನಿರಾಕರಿಸಿದ್ದಾರೆ. ರೈತ ಹಿತ ಕಾಯುವ ವಿಶ್ವಾಸವಿದೆ. ಸಿದ್ದರಾಮಯ್ಯನವರು ರೈತರ ಪರ ನಿಲುವು ತೆಗೆದುಕೊಳ್ಳಬೇಕೆಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ
ಈ ಸಂದರ್ಭದಲ್ಲಿ ಖಾಜಾ ಅಸ್ಲಂ ಅಹ್ಮದ ,ಭೀಮಣ್ಣ ನಗನೂರು, ವಿಜಯರಾಣಿ ಸಿರವಾರ, ಬೂದೆಯ್ಯ ಸ್ವಾಮಿ ಗಬ್ಬೂರು, ಆಂಜಿನೇಯ್ಯ ಕುರುಬದೊಡ್ಡಿ, ಮೋಹದ್ ಅಸೀಮುದ್ದೀನ್ ಅಕ್ತರ್ ಇದ್ದರು.
