ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆ ಪರಿಣಾಮ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿಯಾಗಿದ್ದು, ಕೂಡಲೇ ಪರಿಹಾರ ಒದಗಿಸಲು ಪ್ರಾಮಾಣಿಕ ಸರ್ವೇ ಕಾರ್ಯ ನಡೆಯಬೇಕು ಮತ್ತು ರೈತರಿಗೆ ಎಷ್ಟು ನಷ್ಟ ಸಂಭವಿಸಿದೆ ಅಷ್ಟು ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.
ಅವರಿಂದು ನಗರದಲ್ಲಿ ಮಾಧ್ಯಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, “ಜಿಲ್ಲೆಯ ಸಿಂಧನೂರು, ಮಸ್ಕಿ, ಲಿಂಗಸುಗೂರು ಸೇರಿದಂತೆ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಗಾಳಿ ಮಳೆಯಿಂದ 2.50 ಲಕ್ಷ ಎಕರೆ ಪ್ರಮಾಣದಲ್ಲಿ ಭತ್ತದ ಬೆಳೆ ನಾಶವಾಗಿದೆ. ರೈತ ಕಷ್ಟಪಟ್ಟು ಬೆಳೆದ ಬೆಳೆ ಕಟಾವಿಗೆ ಬಂದ ಸಮಯದಲ್ಲಿ ಹವಾಮಾನ ವೈಪರೀತ್ಯ ಕಾರಣದಿಂದ ನೆಲಕಚ್ಚಿ ಸಂಪೂರ್ಣವಾಗಿ ಹಾಳಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಈಗಾಗಲೇ ಭೇಟಿ ಮಾಡಿ ಸಮಸ್ಯೆಯ ಕುರಿತು ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಗಳು ಸರ್ವೆ ಕಾರ್ಯ ಮಾಡಿಸುವುದಗಿ ಹೇಳಿದ್ದಾರೆ” ಎಂದರು.
“ಜಿಲ್ಲೆಯಲ್ಲಿ ಇಷ್ಟೆಲ್ಲ ಬೆಳೆ ಹಾನಿಯಾದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ ಅಥವಾ ವಿರೋಧ ಪಕ್ಷದವರಾಗಲಿ ಸಹಕರಿಸುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಕೇಂದ್ರದ ವಿರುದ್ದ ಹಾಗೂ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಕಿತ್ತಾಡಿಕೊಳ್ಳಲು ಮುಂದಾಗಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾಗ ಮೋಹನ್‌ದಾಸ್ ಏಕ ಸದಸ್ಯ ವಿಚಾರಣಾ ಸಮಿತಿ ಸಂವಿಧಾನ ಬಾಹಿರ: ಮಹೇಂದ್ರ ಕುಮಾರ್
ಜಿಲ್ಲೆಯಲ್ಲಿ ಶೇ.80ರಷ್ಟು ಭತ್ತದ ಬೆಳೆ ಹಾನಿಯಾಗಿದ್ದು, ಕೂಡಲೇ ಸರ್ಕಾರ ಎಕರೆಗೆ 25 ಸಾವಿರದಂತೆ ಬೆಳೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರಮುಖರಾದ ಬೂದಯ್ಯ ಸ್ವಾಮಿ, ಅಮರೇಶ ಆಲ್ದಾಳ, ಲಿಂಗಾರೆಡ್ಡಿ, ನರಸಿಂಹಲು ಸೇರಿದಂತೆ ಇತರರು ಉಪಸ್ಥಿತರಿದ್ದರು.
