ರಾಯಚೂರು-ಮಾನ್ವಿ ಎಕ್ಸ್‌ಪ್ರೆಸ್ ಹೈವೆ ರಸ್ತೆಗೆ ಜಮೀನು ಸ್ವಾಧೀನಪಡಿಸಿಕೊಂಡು ಹೆದ್ದಾರಿ ಪ್ರಾಧಿಕಾರದವರು ರೈತರ ಜಮೀನನ್ನು ಬಳಸಿಕೊಂಡು ರೈತರಿಗೆ ಈವರೆಗೆ ಭೂಸ್ವಾಧೀನ ಪರಿಹಾರದ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಪರಿಹಾರ ನೀಡುತ್ತಿಲ್ಲ. ಇದರಿಂದ ರೈತರು ಕಚೇರಿಗಳಿಗೆ ಅಲೆದಾಡುವಂತಾಗಿದೆ.
ರಾಯಚೂರು ಜಿಲ್ಲಾ ಕೇಂದ್ರದಿಂದ ಮಾನ್ವಿ ತಾಲೂಕಿಗೆ ತೆರಳುವ ಮಾರ್ಗ ಮಧ್ಯದ ಕಲ್ಲೂರು ಗ್ರಾಮದ 30 ಮಂದಿ ರೈತರ ಜಮೀನನ್ನು ವಶಪಡಿಸಿಕೊಂಡು ಇನ್ನೂ ಪರಿಹಾರ ನೀಡದೆ ಹಾಗೂ ಎಕರೆಗೆ ತಕ್ಕಂತೆ ಯಾವುದೇ ದರ ಹೇಳದೆ ಸತಾಯಿಸುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ಅಧಿಕಾರಿಗಳು ಜಮೀನು ವಶಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ನೀರಾವರಿ ಭೂಮಿ, ಖುಷ್ಕಿ ಭೂಮಿ ಒಂದು ಎಕರೆಗೆ ಎಷ್ಟು ಹಣ ಎಂಬುದಾಗಿ ಜಮೀನಿನ ಬೆಲೆ ಕುರಿತು ಯಾವುದೇ ರೀತಿಯ ಮಾಹಿತಿ ನೀಡದೆ ರಸ್ತೆ ಕಾಮಗಾರಿ ಪ್ರಾರಂಭಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ.

ಜಮೀನು ಕಳೆದುಕೊಂಡ ಭೀಮರಾಯ ಕಲ್ಲೂರು ಮಾತನಾಡಿ,”ನಮಗೆ 2 ಎಕರೆ ಜಮೀನಿದೆ. ಹುಟ್ಟಿದಾಗಿನಿಂದಲೂ ವ್ಯವಸಾಯ ಕೃಷಿಯಲ್ಲಿ ಕೆಲಸ ಮಾಡುತ್ತ ಬಂದಿದ್ದೇವೆ. ಈಗ ರಸ್ತೆ ಕಾಮಗಾರಿಗಾಗಿ ನಮ್ಮ ಭೂಮಿ ಕಳೆದುಕೊಂಡಿದ್ದೇವೆ. ಅವರು ನೀಡುವ ಹಣದಿಂದ ಬೇರೆ ಕಡೆ ಒಂದಿಂಚು ಜಾಗವನ್ನೂ ಖರೀದಿಸಲು ಸಾಧ್ಯವಿಲ್ಲ. ಜಮೀನಿನ ಪರಿಹಾರದ ಹಣ ಕೊಡುವುದಕ್ಕೇ ನಮ್ಮನ್ನು ಸಾವಿರಾರು ಬಾರಿ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಲ್ಲೂರು ಗ್ರಾಮದ ಪಕ್ಕದ ಕಪಗಲ್ ಗ್ರಾಮದ ಭೂಮಿ ಕಳೆದುಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೆ ಕಲ್ಲೂರ ಗ್ರಾಮದ 30 ಮಂದಿ ರೈತರಿಗೆ ಒಂದು ಪೈಸೆಯೂ ಹಣ ಕೊಟ್ಟಿಲ್ಲ, ಜಮೀನಿನಲ್ಲಿ ಸಾವಿರಾರು ಹಣ ಖರ್ಚುಮಾಡಿ ಬೆಳೆ ಬಿತ್ತನೆ ಕಾರ್ಯ ನಡೆದಿದೆ. ಆದರೆ ರಸ್ತೆ ಕಾಮಗಾರಿಗೆಂದು ಭೂಮಿ ವಶಪಡಿಸಿಕೊಂಡು ರೈತರನ್ನು ಕಂಗಾಲು ಮಾಡಿದ್ದಾರೆ” ಎಂದರು.

ರೈತ ಮುಖಂಡ ಸಾಜೀದ ಮಾತನಾಡಿ, “ಹೈವೆ ರಸ್ತೆಗಾಗಿ ರೈತರ ಒಂದು ಏಕರೆಯಷ್ಟು ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ಕಡೆ ಇನ್ನೂ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಂಡಿದ್ದು, ಯಾವುದೇ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ತಮ್ಮ ಖಾತೆಗೆ ಹಾಕಲಾಗುವುದೆಂದು ಕೇವಲ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ” ಎಂದು ಅಸಮಾದಾನ ವ್ಯಕ್ತಪಡಿಸಿದರು.
“ರೈತರು ರಸ್ತೆಗಾಗಿ ಜಮೀನು ಬಿಟ್ಟು ಕೊಟ್ಟಿರುತ್ತಾರೆ. ಪ್ರತಿ ಎಕರೆಗೆ ₹30,000ದಿಂದ ₹40,000ರದವರೆಗೆ ಹಣ ಖರ್ಚು ಮಾಡಿ ಬೆಳೆ ಬಿತ್ತನೆ ಮಾಡಲಾಗಿದೆ. ಬರಗಾಲ ಪರಿಸ್ಥಿತಿಯಿದ್ದು, ಹೇಗೂ ಆಗಾಗ ಮಳೆ ಬಂದು ಆಸರೆಯಾಗಿದೆ. ಇವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ನೀಡದಿರುವುದು ಅತಿದೊಡ್ಡ ಸಮಸ್ಯೆಯಾಗಿದೆ” ಎಂದರು.

“ರೈತರರಿಗೆ ಹಲವು ಬಗೆಯ ಸಮಸ್ಯೆಗಳು ಕಾಡುತ್ತಿವೆ. ಹೈವೆ ರಸ್ತೆ ನಿರ್ಮಾಣ ಮಾಡಲು ಸಾವಿರಾರು ಕಾರ್ಮಿಕರು, ಬೃಹತ್ ಲಾರಿ, ಜೆಸಿಬಿ ಸೇರಿದಂತೆ ಇತರ ವಾಹನಗಳು ಬೆಳೆ ಜಮೀನಿನ ಪಕ್ಕದಲ್ಲಿ ತಿರುಗಾಡುತ್ತಿರುವುದರಿಂದ ಬಿತ್ತಿದ ಬೆಳೆಗಳು ಕುಂಠಿತಗೊಂಡಿವೆ. ಅಲ್ಲದೆ ಜಮೀನು ಸರ್ವೇಯಲ್ಲಿ ತಾರತಮ್ಯ ಎಸಗಿದ್ದಾರೆ. ಇವೆಲ್ಲಾ ಸಮಸ್ಯೆ ಎದುರಿಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಕೇಂದ್ರಗಳ ಪ್ರಾರಂಭ; ಎಲ್ಲೆಲ್ಲಿ?
ಮಾನ್ವಿಯಿಂದ ಪ್ರಾರಂಭವಾದ ರಸ್ತೆ ಕಾಮಗಾರಿ ಕಪಗಲ್, ಕಲ್ಲೂರು, ಸಾತ್ ಮೈಲ್ ಮೂಲಕ ರಾಯಚೂರು ಜಿಲ್ಲಾ ಕೇಂದ್ರದವರೆಗೂ ಕಾಮಗಾರಿ ನಡೆಯುತ್ತಿದೆ. ಕೆಲವು ರೈತರಿಗೆ ಹೆದ್ದಾರಿ ಪ್ರಾಧಿಕಾರದಿಂದ ಕಡಿಮೆ ಪರಿಹಾರ ಬಂದಿದೆ. ನೀರಾವರಿ ಭೂಮಿಯನ್ನು ಖುಷ್ಕಿ ಭೂಮಿಯೆಂದು ಗುರುತಿಸಿ ಕಡಿಮೆ ಪರಿಹಾರ ನೀಡಲಾಗಿದೆಯೆಂಬ ಆರೋಪವಿದೆ” ಎಂದು ಹೇಳಿದರು.
“ರಸ್ತೆಗಾಗಿ ಭೂಮಿಯೂ ಹೋಯಿತು. ಈಗ ಬೆಳೆದ ಬೆಳೆಯೂ ಧೂಳಿನಿಂದ ಹಾಳಾಗಿದೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್