ಕೃಷಿ ಹೊಂಡದ ಹೆಸರಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿರುವ ಆರೋಪ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದಲ್ಲಿ ಕೇಳಿಬಂದಿದೆ. ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿರುವುದರಿಂದ ಗ್ರಾಮಸ್ಥರ ಮನೆಯ ಗೋಡೆಯಲ್ಲಿ ಬಿರುಕು ಮೂಡುತ್ತಿರುವುದಾಗಿ ಗ್ರಾಮದ ಮಂದಿ ನೋವು ತೋಡಿಕೊಂಡಿದ್ದಾರೆ.
ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿರುವುದರಿಂದ ಸುತ್ತಮುತ್ತ ಮನೆಗಳು ಬಿರುಕು ಬಿಟ್ಟು ಇಂದು,ನಾಳೆ ಬೀಳುವ ಪರಿಸ್ಥಿತಿ ಉಂಟಾಗುತ್ತಿದೆ. ಇವರಿಗೆಲ್ಲಾ ಯಾರು ಅನುಮತಿ ನೀಡಿದ್ದು ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಬೆಟ್ಟದೂರು ಗ್ರಾಮದಲ್ಲಿ ಮೇ ಸುಚಿತ್ ಮಿಲೇನಿಯಂ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಕೃಷಿಹೊಂಡ ಕೆಲಸ ನಿರ್ವಹಿಸುವುದೆಂದು ಪರವಾನಗಿ ಪಡೆದಿದ್ದಾರೆ. ಕಂಪನಿಯ ಮಾಲೀಕರು ಕಲ್ಲು ಗಣಿಗಾರಿಕೆ ಪ್ರಾರಂಭಿಸಿ ಅಲ್ಲಿನ ಕಲ್ಲುಗಳನ್ನು ಬ್ಲಾಸ್ಟ್ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲೂಕಿನ ಬೆಟ್ಟದೂರು ಗ್ರಾಮದ ನೀರಮಾನ್ವಿ ಸೀಮಾಂತರದಲ್ಲಿ ಬರುವ ಸ.ನಂ:55/1/ ವಿಸ್ತೀರ್ಣ 11 ಎಕರೆ 07 ಗುಂಟೆ ಪೈಕಿ 5 ಎಕರೆ ಜಮೀನಿನಲ್ಲಿ ಮತ್ತು ಸ.ನಂ: 56/1 ವಿಸ್ತೀರ್ಣ 7-03 ಗುಂಟೆ ಪೈಕಿ 5 ಎಕರೆ ಜಮೀನಿನಲ್ಲಿ ಕಲ್ಲು ಬಂಡೆಗಳಿಂದ ಕೂಡಿದ್ದು ಅದನ್ನು ಕೃಷಿ ಹೊಂಡ ನಿರ್ಮಿಸುವುದು ಎಂದು ದಾಖಲೆ ನೀಡಿ ಅನುಮತಿ ಪಡೆಯಲಾಗಿತ್ತು. ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ಗ್ರಾಮಸ್ಥರಿಗೆ, ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಜಮೀನು ಹೆದ್ದಾರಿ ಪಾಲು; ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಟ*
ಈ ಬಗ್ಗೆ ಜನಸೇವಾ ಫೌಂಡೇಶನ್ ಜಾವೀದ್ ಖಾನ್ ಮಾತನಾಡಿ, “ಕಂಪನಿಯ ಮುಖ್ಯಸ್ಥರು ಕೃಷಿಹೊಂಡ ನಿರ್ಮಿಸಿ ರೈತರಿಗೆ ಉದ್ಯೋಗ ನೀಡಲಾಗುವುದೆಂದು ಕಾನೂನು ರೀತಿಯಲ್ಲಿ ಪರವಾನಗಿ ಪಡೆದು ಅನಧಿಕೃತವಾಗಿ ಕಲ್ಲುಗಣಿಗಾರಿಕೆ ಕೆಲಸ ಪ್ರಾರಂಭಿಸಿ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಕಲ್ಲು ಗಣಿಗಾರಿಕೆಯಲ್ಲಿ ದಿನಕ್ಕೆ ಏಳೆಂಟು ಬಾರಿ ಬ್ಲಾಸ್ಟ್ ಮಾಡುತ್ತಾರೆ. ಗಣಿಗಾರಿಕೆ ನಡೆಸಲಾಗುವ ಸ್ಥಳಕ್ಕೂ ಗ್ರಾಮಕ್ಕೂ ಬರೀ 300 ಮೀಟರ್ ಅಂತರವಿದೆ. ಬ್ಲಾಸ್ಟ್ ನಡೆಸುತ್ತಿರುವ ಕಾರಣದಿಂದ ಸುತ್ತಮುತ್ತಲಿನ 200 ಕ್ಕಿಂತಲೂ ಹೆಚ್ಚು ಮನೆಗಳ ಗೋಡೆ, ಕಾಂಪೌಂಡ್ ಗೋಡಗಳಲ್ಲಿ ಬಿರುಕು ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಇದು ಬೀಳಲೂಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಗಣಿಗಾರಿಕೆ ನಡೆಸುತ್ತಿರುವುದರಿಮ ನಿತ್ಯ ನೂರಾರು ಸಂಖ್ಯೆಯಲ್ಲಿ ಬೃಹತ್ ಲಾರಿಗಳು ಟಿಪ್ಪರ್‌ಗಳು ಗ್ರಾಮದಲ್ಲಿ ಓಡಾಡುತ್ತಿವೆ. ಇದರಿಂದ ಗ್ರಾಮದೆಲ್ಲಡೆ ಧೂಳಿನ ವಾತಾವರಣ ಸೃಷ್ಟಿಯಾಗಿದೆ. ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ರಾಮಸ್ಥರಿಗೆ ಧೂಳು ಸಮಸ್ಯೆಯಾಗಿ ಬಿಟ್ಟಿದೆಯಲ್ಲದೇ, ಜಮೀನಲ್ಲಿ ರೈತರು ಬೆಳೆದ ಬೆಳೆಗಳು ಕೂಡ ಧೂಳಿನಿಂದಾಗಿ ನಾಶವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದನ್ನಾದರೂ ಕಾರ್ಯರೂಪಕ್ಕೆ ತರುವಾಗ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿತ್ತು. ಅದಾಗಿಲ್ಲ. ಈ ಕಲ್ಲು ಗಣಿಗಾರಿಕೆಯಿಂದ ಗ್ರಾಮದ ಜನರ ನೆಮ್ಮದಿ ಹಾಳಾಗಿದೆ. ಇದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗಿದೆ. ಈ ವರೆಗೆ ಈ ಬಗ್ಗೆ ಕ್ರಮ ಜರುಗಿಸಿಲ್ಲ. ತಕ್ಷಣ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸ್ಥಳಕ್ಕೆ ಆಗಮಿಸಿ ಗಣಿಗಾರಿಕೆಯನ್ನು ನಿಲ್ಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬುದು ಗ್ರಾಮದ ಜನರ ಆಗ್ರಹ.
