ರಾಯಚೂರು ತಾಲೂಕಿನ ಚಿಕ್ಕಸುಗೂರು ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆಗಳು ಸರಕಾರದ ನಿಯಮ ಗಾಳಿಗೆ ತೂರಿ ಮನಬಂದಂತೆ ಕಾರ್ಯವಹಿಸುತ್ತಿವೆ. ಕೂಡಲೇ ಇಂತ ಕಾರ್ಖಾನೆಗಳ ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಚಿಕ್ಕಸುಗೂರು ಕೈಗಾರಿಕಾ ಪ್ರದೇಶದಲ್ಲಿ ತಲೆಯೆತ್ತಿರುವ ಅನೇಕ ರಾಸಾಯನಿಕ ಕಾರ್ಖಾನೆಗಳಿಂದ ಹೊರಸೂಸುವ ವಿಷಯುಕ್ತ ಗಾಳಿಯನ್ನು ಸೇವಿಸಿ ಸುತ್ತಮುತ್ತ ಸಾರ್ವಜನಿಕರಿಗೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಈ ಬಗ್ಗೆ ರೈತ ಸಂಘದ ಮುಖಂಡ ಮಂಜುನಾಥ ಮಾತನಾಡಿ, “ರಾಸಾಯನಿಕ ಕಾರ್ಖಾನೆಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ನಡೆಸುತ್ತಿದ್ದಾರೆ ಇದರಿಂದ ರೈತರಿಗೆ ಜನ ಜಾನುವಾರು ಸಹಿತ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಹೇಳಿದರೂ ಸಂಬಂಧಪಟ್ಟವರು ತಮಗೆ ಸಂಬಂಧವಿಲ್ಲದಂತೆ ಇದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಳಿಮಳೆಗೆ ನೆಲಕಚ್ಚಿದ ಸಜ್ಜೆ, ಭತ್ತ; ರೈತರು ಕಂಗಾಲು
ರಾಸಾಯನಿಕ ಕಾರ್ಖಾನೆಗಳು ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನು ಅಕ್ಕಪಕ್ಕದ ಕೆರೆ ಹಾಗೂ ನದಿಗಳಿಗೆ ಎಗ್ಗಿಲ್ಲದೇ ಬಿಡುತ್ತಿರುವುದರಿಂದ ಈ ನೀರನ್ನು ಸೇವಿಸುವ ದನ ಕರುಗಳು ಹಾಗೂ ಸಾರ್ವಜನಿಕರಿಗೆ ಮೂತ್ರಪಿಂಡ, ಲಂಗ್ಸ್, ಹಾಳಾಗಿ ಕ್ಯಾನ್ಸರ್ ಎಂಬ ಮಾರಕ ರೋಗಗಳಿಗೆ ತುತ್ತಾಗಿದ್ದು ಉದಾಹರಣೆಗಳು ಸಾಕಷ್ಟಿವೆ ಎಂದರು.
ಅನೇಕ ಬಾರಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿಯನ್ನು ಸಲ್ಲಿಸಿದರೂ ಸಹ ಸದರಿಯವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಾರ್ಖಾನೆಯವರ ಜೊತೆ ಭಾಗಿಯಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆಗಳ ಸಮಸ್ಯೆಯಿಂದ ಇಡೀ ಗ್ರಾಮವೇ ತೊರೆಯಬೇಕು ಎಂಬ ಸ್ಥಿತಿಯಲ್ಲಿ ಗ್ರಾಮಸ್ಥರು ಇದ್ದಾರೆ ತಕ್ಷಣ ಮೇಲಾಧಿಕಾರಿಗಳು ಪರಿಶೀಲಿಸಿ ಪರವಾನಿಗೆ ರದ್ದು ಪಡಿಸಿ ಹಾಗೂ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶಿವರಾಜ್ ಆಲ್ದಾಳ, ರೈತರು ಇನ್ನಿತರರು ಹಾಜರಿದ್ದರು.