ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
“ಸರ್ಕಾರ ಜೋಳ ಖರೀದಿ ಕೇಂದ್ರ ನೊಂದಣಿ ಆರಂಭಿಸಿದ್ದು, 1 ಎಕರೆಗೆ 10 ಕ್ವಿಂಟಲ್ ನಿಗದಿ ಮಾಡಿದೆ. ಇದನ್ನು ಪ್ರತಿ ಎಕರೆಗೆ 25 ಕ್ವಿಂಟಲ್ ನಿಗದಿಪಡಿಸಿ ಖರೀದಿ ಮಾಡಬೇಕು. ತುಂಗಭದ್ರಾ ಎಡದಂಡೆ ನಾಲೆಗೆ ಮೈಲ್ ಸಂಖ್ಯೆ 47, 69, 90, 104ರಲ್ಲಿ ನಿಗದಿತ ಗೇಜ್ ಕಾಯ್ದುಕೊಂಡು ಏಪ್ರಿಲ್ 10ರವರೆಗೆ ನೀರು ಪೂರೈಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಫಸಲ್ ಭೀಮಾ ಯೋಜನೆಯಲ್ಲಿ ರೈತರ ಖಾತೆಗೆ ಹಣ ಜಮಾ ಆಗದೆ ಬೇರೆಯವರ ಖಾತೆಗೆ ಹಣ ಜಮಾವಾದ ಬಗ್ಗೆ ಜಿಲ್ಲೆಯಲ್ಲಿ ಸಿರವಾರ, ಮಾನ್ವಿ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದರೂ ತನಿಖೆ ಮಾತ್ರ ವಿಳಂಬವಾಗಿದೆ. ಕೂಡಲೇ ತನಿಖೆ ಮುಗಿಸಿ ಫಲಾನುಭವಿಗಳ ರೈತರ ಖಾತೆಗೆ ಹಣ ಜಮಾ ಮಾಡಬೇಕು” ಎಂದು ಆಗ್ರಹಿಸಿದರು.
“2024-25ರ ಅತಿವೃಷ್ಠಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಕೊಡಬೇಕು. ಮತ್ತು 2023-24ರ ಬರಗಾಲದಿಂದ ನಷ್ಟ ಹೊಂದಿದ ಕೆಲವು ರೈತರಿಗೆ ಮಾತ್ರ ಬೆಳೆನಷ್ಟ ಪರಿಹಾರ ನೀಡಿದೆ. ಉಳಿದ ಎಲ್ಲ ರೈತರಿಗೂ ಪರಿಹಾರ ನೀಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಮೋಸವಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ತೊಗರಿ, ಮೆಣಸಿನಕಾಯಿ ಮತ್ತು ಭತ್ತದ ದರ ತೀವ್ರ ಕುಸಿತವಾಗಿದ್ದು, ₹2,000 ಪ್ರೋತ್ಸಾಹ ಧನ ನೀಡಿ ಸರ್ಕಾರವೇ ಖರೀದಿ ಮಾಡಬೇಕು” ಎಂದು ಮನವಿ ಮಾಡಿದರು.
“ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ರೈತರು ತಮ್ಮ ಸರಕು ಸಾಗಾಣಿಕೆಗಳನ್ನು ಸಾಗಿಸಲು ತೊಂದರೆಯಾಗುತ್ತಿದೆ. ಮಾನ್ವಿ ತಾಲೂಕಿನ ಜಾನೇಕಲ್, ತಡಕಲ್, ಮರಕಮದಿನ್ನಿಯವರೆಗೆ ತೀರಾ ರಸ್ತೆ ಹದೆಗೆಟ್ಟಿದು, ಇದರ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಸರ್ಕಾರ ನಿಗದಿ ಮಾಡಿದಂತೆ ರೈತರಿಗೆ 7 ತಾಸು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೂಡಲೇ 7 ತಾಸು ಪೂರೈಕೆಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸರ್ಕಾರಿ ಶಾಲೆಗೆ ತಡೆಗೋಡೆ ನಿರ್ಮಿಸುವಲ್ಲಿ ಶಾಸಕ ಶರಣಪ್ರಕಾಶ ಪಾಟೀಲ್ ವಿಫಲ; ಆರೋಪ
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ಉಪಾಧ್ಯಕ್ಷ ಬಸನಗೌಡ ಬಲ್ಲಟಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸೂಗುರಯ್ಯ ಸ್ವಾಮಿ, ಯಂಕಪ್ಪ ಕಾರಬಾರಿ, ಜಿಲ್ಲಾದ್ಯಕ್ಷ ಪ್ರಭಾಕರ ಪಾಟೀಲ್, ಮಲ್ಲಣ್ಣದಿನ್ನಿ, ಬೂದಯ್ಯಸ್ವಾಮಿ, ಗೋವಿಂದ ನಾಯಕ, ಹನುಮಗೌಡ, ವೀರೇಶ ಗವಿಗಟ್, ಶಾಂತಪ್ಪ ಗೌಡ ಗಬ್ಬೂರು, ದೇವರಾಜ ನಾಯಕ, ಹಾಜಿ ಮಸ್ತಾನ್, ಶರಣಪ್ಪ ಗೌಡ ಯೇರಡ್ಡಿ, ಸಿದ್ದಯ್ಯಸ್ವಾಮಿ, ಮಲ್ಲಣ್ಣ ಗೌಡೂರು, ಬ್ರಹ್ಮಯ್ಯ ಆಚಾರಿ, ಚಾಮರಸ ಜಾನೇಕಲ್, ಶಂಕ್ರಪ್ಪ ಗೌಡ, ಬಸವರಾಜ ನವಲಕಲ್, ಚಂದಪ್ಪ ಬಲ್ಲಟಗಿ, ಶಿವಪುತ್ರ ಸೇರಿದಂತೆ ಅನೇಕರು ಇದ್ದರು.
