ತುಂಗಭದ್ರಾ ಎಡದಂಡೆ ಕಾಲುವೆ ಸಂಖ್ಯೆ- 76/5 ವಿತರಣಾ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದಿರುವ ಜೋಳ, ಮೆಣಸಿನಕಾಯಿ, ಹತ್ತಿ ಬೆಳೆಗಳಿಗೆ ನೀರು ಹರಿಸಬೇಕು ಎಂದು ಈ ವ್ಯಾಪ್ತಿಯ ರೈತರು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
“ವಿತರಣಾ ಕಾಲುವೆ ಸಂಖ್ಯೆ 76/5ರ ವ್ಯಾಪ್ತಿಯಲ್ಲಿ ಸುಮಾರು 6 ಗ್ರಾಮಗಳು ಸೇರಿದ್ದು, ಜಿನೂರು ಕ್ಯಾಂಪ್, ಜಿನೂರು, ಪೋತ್ನಾಳ, ಮುದ್ದಂಗುಡ್ಡಿ, ಈರಲಗಡ್ಡೆ, ಖಾರಬದಿನ್ನಿ, ಈ ಗ್ರಾಮಗಳಲ್ಲಿ ಜೋಳವನ್ನು ಹೆಚ್ಚಾಗಿ ಬೆಳೆಯಲಾಗಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿವೆ. ಜೋಳ, ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗಳನ್ನೂ ಬೆಳೆದಿದ್ದು, ಸಮರ್ಪಕವಾಗಿ ಮಳೆಯಾಗದೆ ಇರುವುದರಿಂದ ಬೆಳೆದು ನಿಂತ ಬೆಳೆಗಳು ಒಣಗಿ ಹೋಗಿದ್ದು, ಲಕ್ಷಾಂತರ ರೂ ಸಾಲ ಮಾಡಿ ಬೆಳೆದ ಬೆಳೆಗಳು ಹಾನಿಯಾಗಿರುವುದರಿಂದ ರೈತರಿಗೆ ತುಂಬಲಾರದ ನಷ್ಟ ಉಂಟಾಗಿದೆ” ಎಂದು ಹೇಳಿದರು.
“ರೈತರು ಜಮೀನುಗಳಲ್ಲಿ ಬೆಳೆದ ಬೆಳೆ ನಷ್ಟವಾಗಿವೆ. ಜೀವನ ನಿರ್ವಹಣೆಗೆ ಸಾಲ ಮಾಡಿ ಬೆಳೆ ಬೆಳೆದಿದ್ದು, ಸಾಲ ತೀರಿಸಲು ಜಮೀನುಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಕುಟುಂಬಗಳು ಆರ್ಥಿಕ ನಷ್ಟಕ್ಕೆ ತಲುಪಿದ್ದು, ಜೀವನಕ್ಕಾಗಿ ಗುಳೆ ಹೋಗುವ ಹಂತಕ್ಕೆ ಬಂದಿದೆ. ಹಾಗಾಗಿ ರೈತರು ಬೆಳೆದಿರುವ ಬೆಳೆಗಳನ್ನಾದರೂ ಉಳಿಸಿಕೊಳ್ಳಲು ಕಾಲುವೆಗೆ ನೀರನ್ನು ಹರಿಸಿದರೆ ಅನುಕೂಲವಾಗುತ್ತದೆ. ಒಂದು ವಾರದಲ್ಲಿ ನೀರು ಹರಿಸದಿದ್ದರೆ, ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರಾಜ್ಯದಲ್ಲಿ ಬರ ನಿರ್ವಹಣೆಗೆ ₹ 400 ರಿಂದ ₹ 500 ಕೋಟಿ ಮೀಸಲು: ಜಿ ಪರಮೇಶ್ವರ್
ಈ ಸಂದರ್ಭದಲ್ಲಿ ಬುಡ್ಡಪ್ಪ, ಯಲ್ಲಪ್ಪ, ಚಿದಾನಂದ, ಅಣ್ಣಪ್ಪ, ಸಣ್ಣ ಅಯ್ಯಪ್ಪ, ಹುಚ್ಚಪ್ಪ, ಭೀಮೇಶಪ್ಪ, ಮಲ್ಲೇಶ, ಬಸವರಾಜ, ಶಿವಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ