ಕೃಷ್ಣ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ನಾಲೆಗಳಿಗೆ ಏಪ್ರಿಲ್ 20ರವರೆಗೆ ನೀರು ಹರಿಸಲು ಒತ್ತಾಯಿಸಿ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದಿಂದ ತಾಲೂಕು ಸಹಾಯಕ ಆಯುಕ್ತ ಕಚೇರಿವರೆಗೆ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಿ ಅಹೋರಾತ್ರಿ ಮನವಿ ಸಲ್ಲಿಸಲಾಯಿತು.
ಗುರುಗುಂಟ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರ ಬದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಧರಣಿ ನಡೆಸುತ್ತಿದ್ದು, 4ನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ, ಭಾನುವಾರ ರಾತ್ರಿ ಪೂರ್ತಿ ಭಜನೆ ಮಾಡುವ ಮೂಲಕ ಅಹೋರಾತ್ರಿ ಧರಣಿ ನಡೆಸಿದ್ದಾರೆ. ರೊಚ್ಚಿಗೆದ್ದ ರೈತರು ಭಾನುವಾರ ರಾತ್ರಿ ಹೊಸ ದರ್ಬಾರ್‌ನಿಂದ ಸಂಸ್ಥಾನಿಕ ರಾಜಸೋಮನಾಥನಾಯಕ ನೇತೃತ್ವದಲ್ಲಿ ಹೋಬಳಿಯ ನೂರಾರು ರೈತರು ಹಚ್ಚಿದ ಮೇಣದ ಬತ್ತಿಯನ್ನು ಕೈಯಲ್ಲಿಡಿದು ಶಾಂತಿ ದ್ಯೋತಕವಾದ ಜ್ಯೋತಿ ಮೆರವಣಿಗೆ ನಡೆಸಿದರು.
ಅಹೋರಾತ್ರಿಯ ಧರಣಿ 4ನೇ ದಿನಕ್ಕೆ ಪಾದಾರ್ಪಿಸಿದರೂ ಯಾವೊಬ್ಬ ಜನಪ್ರತಿನಿಧಿಗಳೂ ಸ್ಥಳಕ್ಕೆ ಬಾರದಿರುವುದನ್ನು ಖಂಡಿಸಿದ ರೈತರು, “ಶಾಂತಿಯ ಪ್ರತೀಕವಾಗಿ ಜ್ಯೋತಿಯ ಮೆರವಣಿಗೆ ನಡೆಸಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಂಡು ಬೇಡಿಕೆಯನ್ನು ಪಡೆದೇ ಪಡೆಯುತ್ತೇವೆ. ಪ್ರಾಣ ಬಿಟ್ಟೆವು ಧರಣಿ ಹಿಂಪಡೆಯಲಾರೆವು ಎಂದು ಏರುದನಿಯಲ್ಲಿ ಕೂಗುತ್ತಾ ಮೆರವಣಿಗೆ ಸಾಗಿದರು.
ಇದನ್ನೂ ಓದಿ: ರಾಯಚೂರು | ಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ
ಈ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶಿವಪುತ್ರಗೌಡ, ತಾಲೂಕ ಅಧ್ಯಕ್ಷ ಪ್ರಸಾದರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ರೈತ ಮುಖಂಡರಾದ ಚೆನ್ನಯ್ಯಸ್ವಾಮಿ, ಸೈಯದ್ ಖುಸುರು, ವಿಜಯಕುಮಾರ ನಾಯಕ, ಶ್ರೀಧರ್ ಪಟ್ಟಣಶೆಟ್ಟಿ, ತಿಪ್ಪಣ್ಣ ಹವಲ್ದಾರ್, ಹನುಮಂತ ಹುಲಗಪ್ಪದೊಡ್ಡಿ, ಮಹಾಂತೇಶ ಬಿಜ್ಜಲ್, ಭಾಷಸಾಬ್, ತಿರುಮಲ ಸುಬೇದಾರ್, ರಾಮಯ್ಯ, ಗಣೇಶ ರತ್ನಗಿರಿ, ಪವನ್ ಕುಲಕರ್ಣಿ, ಗುರು ಇಲ್ಲೂರು, ಶಿವಲಿಂಗ ಸೇರಿದಂತೆ ಅನೇಕರು ಇದ್ದರು.
