ಸರ್ಕಾರದ ಐಸಿಐ ನಿಯಮದ ಪ್ರಕಾರ ಮಾರ್ಚ್ 30ರವರಗೆ ಕಾಲುವೆ ನೀರು ಬಂದ್ ಮಾಡಬಾರದೆಂದು ರೈತರ ಜತೆ ಚರ್ಚೆಯಾಗಿದ್ದರೂ ಅಧಿಕಾರಿಗಳು ಏಕಾಏಕಿ ಕಾಲುವೆ ನೀರು ಬಂದ್ ಮಾಡುವುದಕ್ಕೆ ಮುಂದಾಗಿರುವುದು ಖಂಡನೀಯ. ಏಪ್ರಿಲ್ 10ರವರೆಗೆ ಕಾಲುವೆ ನೀರನ್ನು ಬಂದ್ ಮಾಡಬಾರದು ಎಂದು ಆಗ್ರಹಿಸಿ ರೈತರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಹೊರವಲಯದ ಪ್ರಮುಖ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
“ಹಳ್ಳಿಗಳಿಗೆ ಕುಡಿಯುವ ನೀರು ಬೇಕಾಗಿದೆಯೆಂದು ನೆಪವೊಡ್ಡಿ ಅಧಿಕಾರಿಗಳು ಕಾಲುವೆ ನೀರನ್ನು ಬಂದ್ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ. ರೈತರು ಈ ನೀರನ್ನು ನಂಬಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದು, ನೀರು ಇಲ್ಲದಿದ್ದರೆ ರೈತರು ಬೆಳೆದ ಬೆಳೆಯಲ್ಲಾ ನಾಶವಾಗುತ್ತದೆ. ಇದರಿಂದ ಮನನೊಂದ ರೈತ ಆತ್ಮಹತ್ಯೆಗೆ ಗುರಿಯಾಗುತ್ತಾನೆ” ಎಂದು ಹೇಳಿದರು.
ಶರಣಪ್ಪ ಮುರುಳಿ ಮಾತನಾಡಿ, “ತುಂಗಭದ್ರಾ ಎಡದಂಡೆ ನಾಲೆಯ 54ನೇ ಡಿಸ್ಟ್ರಿಬ್ಯೂಟರ್‌ನ ಮೇಲ್ಭಾಗದ 6 ಎಲ್ 10 ಎಲ್ ಸೇರಿದಂತೆ ಇನ್ನಿತರ ಎಲ್ಲ ಕಾಲುವೆಗಳನ್ನು ಬಂದ್ ಮಾಡಿಕೊಂಡು ಕುಡಿಯುವ ನೀರಿನ ನೆಪ ಮಾಡಿಕೊಂಡು ರೈತರ ಬೆಳೆ ಹಾಳು ಮಾಡುವುದಕ್ಕೋಸ್ಕರ ಏಕಾಏಕಿ ಬೆಳೆ ಬರುವ ಸಮಯದಲ್ಲಿ ನೀರನ್ನು ಬಂದ್ ಮಾಡಿದರೆ ರೈತರು ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲು ಆಗುವುದಿಲ್ಲ. ಇದರಿಂದ ಮನನೊಂದು ರೈತ ಆತ್ಮಹತ್ಯೆಗೆ ಗುರಿಯಾಗುತ್ತಾನೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಸೆಂಬರ್ 1ರಿಂದ ಫೆಬ್ರವರಿ 28ರವರೆಗೆ 3,800 ಕ್ಯುಸೆಕ್‌ನಂತೆ ಮಾರ್ಚ್ 01 ರಿಂದ ಮಾರ್ಚ್ 31 ರವರೆಗೆ 4,200 ಕ್ಯುಸೆಕ್ ಮತ್ತು ಏಪ್ರಿಲ್ 01ರಿಂದ ಏಪ್ರಿಲ್ 10ರವರೆಗೆ ಕುಡಿಯುವ ನೀರಿಗೆ ಬಳಸುತ್ತೇವೆಂದು ಸಲಹಾ ಸಮಿತಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವರು, ಉಸ್ತುವಾರಿ ಸಚಿವರು, ಕಾಡ ಅಧ್ಯಕ್ಷರು, ನೀರಾವರಿ ಮುಖ್ಯ ಎಂಜಿನಿಯರ್ ಅಭಿಯಂತರರು, ಕಾರ್ಯನಿರ್ವಾಹಕ ಅಭಿಯಂತರರು ಎಲ್ಲ ತಾಲೂಕಿನ ಶಾಸಕರುಗಳು ಸೇರಿದಂತೆ ಎಲ್ಲರೂ ಭಾಗವಹಿಸಿ ಈ ತೀರ್ಮಾನವನ್ನು ಕೈಗೊಂಡಿದ್ದರು. ಆದರೆ ಆ ತೀರ್ಮಾನವನ್ನು ಗಾಳಿಗೆ ತೂರಿ ಏಕಾಏಕಿ ಬಂದ್‌ಗೆ ಮುಂದಾಗಿರುವುದು ಸರಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬಂಟ್ವಾಳ | ವಿಟ್ಲದಲ್ಲಿ ಸರ್ಕಾರಿ ಬಸ್‌ಗಳ ಮರೀಚಿಕೆ; ಖಾಸಗಿ ಬಸ್‌ಗಳದ್ದೇ ಕಾರುಬಾರು
“ಅಧಿಕಾರಿಗಳು ಕಳ್ಳಾಟ ನಿಲ್ಲಿಸಬೇಕು, ಯಥಾ ಪ್ರಕಾರ ನೀರು ಹರಿಸಬೇಕು. ಬಂದ್ ಮುಂದುವರೆಸಿದರೆ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ ಸೇರಿದಂತೆ ನೂರಾರು ರೈತರು ಇದ್ದರು.
