ಕೃಷ್ಣ ಮತ್ತು ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರೊದಗಿಸುವುದು ಹಾಗೂ ಪ್ರತಿ ಎಕರೆಗೆ ₹30,000 ಬೆಳೆನಷ್ಟ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು.
ರಾಯಚೂರಿನಲ್ಲಿ ನಡೆಸಿದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ರಾಯಚೂರು ಜಿಲ್ಲೆಯ ಸಿಂಧನೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಮನವಿ ಸ್ವೀಕರಿಸದೇ ಹೋದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು” ಎಂದು ಹೇಳಿದರು.
“ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೈಗಾರಿಕೆಗಳಿಗೆ ಅಕ್ರಮವಾಗಿ ನೀರು ಹರಿಸಲಾಗುತ್ತಿದೆ. ಅಕ್ರಮವಾಗಿ ಕೈಗಾರಿಕೆಗಳಿಗೆ ನೀರೋದಗಿಸಲು ಸಾಧ್ಯವಾಗುತ್ತದೆ. ಆದರೆ ರೈತರಿಗೆ ಮಾತ್ರ ನೀರು ದೊರೆಯುತ್ತಿಲ್ಲ. ಮರಳಿ ಬರಳಿ ಇರುವ ಏತ ನೀರಾವರಿ ಯೋಜನೆಯಿಂದ ಜಿಂದಾಲ್ ಕಂಪೆನಿಗೆ ನೀರು ಹರಿಸಲಾಗುತ್ತಿದೆ. ಆದರೆ ಜಲಾಶಯದಲ್ಲಿ ನೀರಿಲ್ಲವೆಂದು ಹೇಳಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಅವ್ಯಾಹುತವಾಗಿ ನೀರಿನ ಕಳ್ಳತನ ನಡೆಯಲು ಸರ್ಕಾರವೇ ನೇರ ಕಾರಣ. ರೈತರ ಆರ್ಥಿಕ ನಷ್ಟಕ್ಕೆ ಸರ್ಕಾರವೇ ಹೊಣೆಯಾಗಿದೆ. ಅಧಿಕಾರ ಇಲ್ಲದೇ ಇರುವಾಗ ರೈತಪರವೆಂದು ಹೇಳುವ ಸಿದ್ದರಾಮಯ್ಯನವರಿಗೆ ಜನತೆ ಅಧಿಕಾರ ನೀಡಿದೆ. ಸವರು ಇದೀಗ ರೈತಪರ ನಿಲುವು ಪ್ರದರ್ಶಿಸಬೇಕು” ಎಂದರು.
“ಡೋಂಗಿ ರಾಜಕಾರಣ ಬಿಟ್ಟು ರೈತರ ಪರವೆಂದು ಸಾಬೀತುಪಡಿಸಬೇಕು. ರಾಜ್ಯಕ್ಕೆ ವಿದ್ಯುತ್ ನೀಡುವ ಜಿಲ್ಲೆಯ ಜನರು ಕಲುಷಿತ ಗಾಳಿ, ನೀರು ಸೇವಿಸುತ್ತಿದ್ದಾರೆ. ಆದರೆ ಜಿಲ್ಲೆಯ ರೈತರಿಗೆ ವಿದ್ಯುತ್ ದೊರೆಯುತ್ತಿಲ್ಲ. ರೈತರಿಗೆ 18 ತಾಸು ವಿದ್ಯುತ್ ನೀಡಲು ಸರ್ಕಾರ ತೀರ್ಮಾನಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಜನರಿಗೆ ಆರೋಗ್ಯ ಸೇವೆಗಳು ದೊರೆಯುತ್ತಿಲ್ಲ. ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಒದಗಿಸಲು ಕ್ರಮವಹಿಸಬೇಕು” ಎಂದರು.
“ಬಿಜೆಪಿ ಸರ್ಕಾರದ ವಿರುದ್ದ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರು ಕಳೆದ ಆರು ತಿಂಗಳಿನಿಂದ ಅಧಿಕಾರ ಮಾಡುತ್ತಿದ್ದಾರೆ. ಕಂದಾಯ, ಸರ್ವೆ ಸೇರಿದಂತೆ ಯಾವುದೇ ಇಲಾಖೆಗಳಲ್ಲಿಯೂ ಹಣವಿಲ್ಲದೆ ಕೆಲಸವೇ ಆಗುತ್ತಿಲ್ಲ. ಪೋಡಿ ಸೇರಿದಂತೆ ಅನೇಕ ಸೌಲಭ್ಯ ಪಡೆಯಲು ರೈತರು ಹಣ ಕಳೆದುಕೊಳ್ಳುವಂತಾಗಿದೆ. ಎಪಿಎಂಸಿಗಳಲ್ಲಿ ನಿತ್ಯವೂ ವಂಚನೆ ನಡೆಯುತ್ತಿದೆ. ತೂಕ, ಸೂಟ್ ತೆಗೆಯುವದು ಸೇರಿದಂತೆ ಎಲ್ಲರದಲ್ಲಿಯೂ ವಂಚಿಸುತ್ತಿದ್ದಾರೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಆರೋಪಿಸಿದರು.
“ಕೃಷಿ ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳು, ಮೈಕ್ರೋ ಫೈನಾನ್ಸ್‌ಗಳೂ ರೈತರಿಗೆ ನೋಟಿಸ್ ನೀಡುತ್ತಿವೆ. ಮುಖ್ಯಮಂತ್ರಿಯವರು ಕೇವಲ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಏಕೆ ಅಧಿಕೃತವಾಗಿ ಆದೇಶ ನೀಡುತ್ತಿಲ್ಲ” ಎಂದು ಪ್ರಶ್ನಿಸಿದರು.
“ಜಿಲ್ಲೆಯಲ್ಲಿ ಕಿರಾಣಿ, ಅಂಗಡಿ, ಪಾನ್ ಶಾಪ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಿಯಮ ಉಲ್ಲಂಘಿಸಿ, ಸರ್ಕಾರಕ್ಕೂ ವಂಚಿಸಿ ರಾತ್ರೋರಾತ್ರಿ ಅಕ್ರಮ ಮರಳು ಸಾಗಾಣೆ ನಡೆಯುತ್ತಿದೆ. ಆದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಹಾಳಾಗುತ್ತಿದ್ದು, ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿರುವುದನ್ನು ತಡೆಯಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾಂಗ್ರೆಸ್ 139ನೇ ಸಂಸ್ಥಾಪನಾ ದಿನಾಚರಣೆ
“ಜೆಸ್ಕಾಂನಿಂದ ಜಾರಿಗೊಳಿಸಲಾಗುತ್ತಿದ್ದ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ರೈತರ ಪಂಪಸೆಟ್ ಸೌಕರ್ಯ ಯೋಜನೆ ಹಿಂಪಡೆಯಲಾಗಿದೆ. ಜಿಲ್ಲೆಯ ಗಂಭೀರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು. ಇಲ್ಲದೇ ಹೋದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಮಣ್ಣ ಜವಳಗೇರಾ, ನರಸಪ್ಪ ದೇವಸೂಗೂರು, ವೆಂಕಟೇಶ ರತ್ನಪುರು, ಜಿ.ರಾಮುಲು, ನಾಗರಾಜ ಖಾಜನಗೌಡ, ಲಾಲಸಾಬ ಪೂಜಾರಿ, ಚನ್ನಪ್ಪ ಹುಣಸಿಹಾಳ ಹುಡಾ, ಕೊಠಾರಿ ಜಯಾ, ಮಂಜುನಾಥ ಚಿಕ್ಕಸೂಗೂರು ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ