ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ಎಂಎಸ್ಪಿ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿದ್ದು, ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು, ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ನೀಡಿರುವ ಬೆಂಬಲ ಬೆಲೆಯಲ್ಲಿ, ಕೇಂದ್ರ ಸರ್ಕಾರ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯ ಮಟ್ಟದಲ್ಲಿ ಎಂಎಸ್ಪಿ ಕಾಯ್ದೆಯನ್ನು ಜಾರಿಗೆ ತರಬೇಕು ಮತ್ತು ವಿಶ್ವವ್ಯಾಪಾರ ಸಂಸ್ಥೆಯ ಡಬ್ಲ್ಯೂಟಿಒನ 13ನೇ ಮಂತ್ರಿ ಸಮ್ಮೇಳನವು ಅಬುದಬಿಯಲ್ಲಿ ನಡೆಯುತ್ತಿದ್ದು, ಸಂಯುಕ್ತ ಕಿಸಾನ್ ಮೋರ್ಚಾ ಭಾರತ ಡಬ್ಲ್ಯೂಟಿಒ ಸದಸ್ಯತ್ವದಿಂದ ಹೊರಬರಬೇಕೆಂದು ದೇಶಾದ್ಯಂತ ಹೋರಾಟಕ್ಕೆ ಕರೆಕೊಟ್ಟಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಹಾರ ಕೊಡಬೇಕು ಮತ್ತು ಫಸಲ್ ಭೀಮಾ ಯೋಜನೆಯಡಿ ಹಣ ಕಟ್ಟಿದ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಜಿಲ್ಲೆಯ ರೈತರ ಕೃಷಿ ಪಂಪ್ಸೆಟ್ಗಳಿಗೆ ಬೇಸಿಗೆಯಲ್ಲಿ ದಿನದ 24ತಾಸು ವಿದ್ಯುತ್ ಒದಗಿಸಬೇಕು, ದೆಹಲಿ ಪ್ರತಿಭಟನೆಗೆ ಹೊರಟಿದ್ದ ರೈತರನ್ನು ಬೇಲಿ ಹಾಕಿ ಹೋರಾಟಕ್ಕೆ ಹೋಗದಂತೆ ನಿಲ್ಲಿಸಿದ್ದು, ಗ್ರಾಮೀಣ ಭಾಗಕ್ಕೆ ಮತ ಕೇಳಲು ಬಂದರೆ ಹಳ್ಳಿಯ ಹೆಬ್ಬಾಗಿಲಿಗೆ ಬೇಲಿ ಹಾಕಿ ಊರ ಒಳಗೆ ಬಾರದಂತೆ ತಡೆಯಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಎಲ್ಲಾ ನದಿ ಜೋಡಣೆಗಳಿಗೆ ಆಶ್ವಾಸನೆ ನೀಡಿತ್ತು. ಕೊಟ್ಟ ಮಾತಿನಂತೆ ಎಲ್ಲಾ ನದಿ ಜೋಡಣೆಗಳನ್ನು ಮಾಡಿ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು. ದೆಹಲಿ ಚಲೋ ಪ್ರತಿಭಟನೆಗೆ ತೆರಳಿದ್ದ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಉಪಾಧ್ಯಕ್ಷ ಕೆ.ವಿರೇಶಗೌಡ ಕಡಗಂದೊಡ್ಡಿ, ನರಸಿಂಗರಾವ್ ಲಕ್ಷ್ಮಣ, ಮಹಿಳಾ ಅಧ್ಯಕ್ಷೆ ಅಕ್ಕಮ್ಮ, ಹುಸೇನಪ್ಪ ರಾಜಲಬಂಡಾ, ಗೋರ್ಕಲ್ ಈರಣ್ಣ, ನರಸಪ್ಪ ಹೊಕ್ರಾಣ, ಹುಲಿಗೆಪ್ಪ ಜಾಲಿಬೆಂಚಿ, ವೆಂಕಟರೆಡ್ಡಿ ರಾಜಲಬಂಡಾ, ಅಬ್ದುಲ್ ಮಜೀದ್ ಬಿಚ್ಚಾಲಿ ಸೇರಿದಂತೆ ಅನೇಕರು ಇದ್ದರು.