ಕೃಷಿ ಮಾರುಕಟ್ಟೆಯಲ್ಲಿ ತೊಗರಿ, ಕಡಲೆ, ಶೇಂಗಾ, ಸೂರ್ಯಪಾನ, ಭತ್ತ, ಈರುಳ್ಳಿ ಇನ್ನಿತರ ಬೆಳೆಗಳು ಮಾರುಕಟ್ಟೆಯಲ್ಲಿ ಸ್ಯಾಂಪಲ್ ತೆಗೆದು ಕೊಂಡು ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿದೆ. ಹೀಗಾಗಿ ಕ್ರಮ ಕೈಗೊಳ್ಳಬೇಕು. ಜೊತೆಗೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ರಾಯಚೂರು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
2023- 24 ನೇ ಸಾಲಿನಲ್ಲಿ ಜಿಲ್ಲೆಯು ಬರಗಾಲ ಎಂದು ಘೋಷಣೆಯಾಗಿದ್ದು, ಜಿಲ್ಲೆಯ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ಕೂಡಲೇ ಬರ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು. 2024-25 ನೇ ವರ್ಷದಲ್ಲಿ ಅತಿಯಾದ ಮಳೆಯಿಂದ ನದಿ, ಹಳ್ಳ ಮತ್ತು ತೆಗ್ಗು ಪ್ರದೇಶದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದ್ದು ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹೊಲಗಳ ಪಂಪ್ ಸೆಟ್‌ಗಳಿಗೆ ಹಾಗೂ ಮನೆಗಳ ಲೈನ್‌ಗಳಿಗೆ ಸಮರ್ಪಕ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ತಕ್ಷಣ ವ್ಯವಸ್ಥೆ ಕಲ್ಪಿಸಿ ಬಿತ್ತನೆಗೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಹತ್ತಿ ಬೆಂಬಲ ಬೆಲೆ ಕಡಿಮೆ ಇದ್ದು ಕನಿಷ್ಟ ರೂ 2000 ಪ್ರೋತ್ಸಾಹ ಧನ ಕೊಟ್ಟು ಖರೀದಿ ಕೇಂದ್ರದ ಮೂಲಕ ಸರಕಾರವೇ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಜಮೀನುಗಳಲ್ಲಿ ನಮೂದಾಗಿರುವ ವಕ್ಫ್ ಪದವನ್ನು ತೆಗೆದು ಹಾಕಬೇಕು, ರೈತರು ಭೂಮಿ ಕಬಳಕೆ ನಿಲ್ಲಿಸಲು ಕ್ರಮ ವಹಿಸಬೇಕು. ನಾರಾಯಣ ಪೂರ ಬಲದಂಡೆ ಮತ್ತು ರಾಂಪೂರ ಏತ ನೀರಾವರಿ ಯೋಜನೆಯಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರದ ಹಣ ಬಾಕಿ ಉಳಿದಿರುವುದನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಹತ್ತಿ ಮಾರುಕಟ್ಟೆಯಲ್ಲಿ ಸ್ಯಾಂಪಲ್ ನೋಡಿ ದರ ನಿಗದಿಪಡಿಸಿದ ನಂತರ ಅನ್‌ಲೋಡ್ ಮಾಡುವ ಸಮಯದಲ್ಲಿ ಅರ್ಧ ಸುರಿದ ನಂತರ 300 ರಿಂದ 400 ದರ ಕಟ್ ಮಾಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ಕನಿಷ್ಟ ಪಕ್ಷ 5-8 ಸಾವಿರ ರೂಪಾಯಿ ನಷ್ಟವಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕು. ರೈತರಿಗೆ ವಂಚನೆ ಮಾಡುತ್ತಿರುವ ದಲ್ಲಾಳಿ ಹಾಗೂ ಮಾಲೀಕನಿಗೆ ಕಠಿಣ ಸೂಚನೆ ಹೊರಡಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಆಳಂದ | ಈ ದಿನ ಫಲಶೃತಿ: ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣಕ್ಕೆ ₹1.80 ಕೋಟಿ ಅನುದಾನ ಬಿಡುಗಡೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ದೊಡ್ಡ ಬಸನಗೌಡ ಬಲ್ಲಟಗಿ, ಕಾರ್ಯದರ್ಶಿ ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಮಲ್ಲಣ್ಣ ದಿನ್ನಿ, ಲಿಂಗಾರೆಡ್ಡಿ, ಬಸವರಾಜ, ಮಾಲಿ ಪಾಟೀಲ್, ಹನುಮಗೌಡ ನಾಯಕ, ವೀರೇಶ ಗವಿಮಠ, ಸಿದ್ದಯ್ಯ ಸ್ವಾಮಿ, ದೇವರಾಜ ನಾಯಕ, ಹಾಜಿ ಮಸ್ತಾನ್, ಮಲ್ಲಣ್ಣ ಗೌಡ, ಶಂಕ್ರಪ್ಪ ಗೌಡ, ಶರಣಪ್ಪ ಗೌಡ, ಗೋವಿಂದ ನಾಯಕ, ತಿಮ್ಮಣ್ಣ ನಾಯಕ, ರವಿ ಗಬ್ಬೂರು, ಅಮರೇಶ ಹಾಲದಳ, ಹುಸೇನ್ ಬಾಷಾ, ಬ್ರಹ್ಮಯ್ಯ ಆಚಾರ, ಬಸವರಾಜ ನವಲಕಲ್, ನಿಂಗಪ್ಪ ಹಟ್ಟಿ, ಚಾಮರಸ ಜಾನೇಕಲ್, ಸೂಗುರೆಡ್ಡಿ ಗಬ್ಬೂರು, ಉಮ್ಮಣ್ಣ ನಾಯಕ, ಉಮಾಪತಿ ಗೌಡ ಸೇರಿದಂತೆ ರೈತರು ಭಾಗವಹಿಸಿದ್ದರು.
