ಒಳ ಮೀಸಲಾತಿ ಜಾರಿ ಮಾಡದೇ ಇಲಾಖೆಯ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ವಿರುದ್ಧ ಇದೇ ಮಾ.3ರಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ವಕೀಲ ಎಸ್ ಮಾರೆಪ್ಪ ಹೇಳಿದರು.
ಅವರಿಂದು ಮಾದ್ಯಮಗೋಷ್ಠಿಯಲ್ಲಿ ಮಾತನಾಡಿ, “ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ರಾಜ್ಯ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ನಾಗಮೋಹನದಾಸ್ ಪರಿಶೀಲನಾ ಸಮಿತಿ ವರದಿ ನೀಡಲು ಮಾರ್ಚ್ 1 ಗಡುವು ಇದೆ. ಆದರೆ ಇಲಾಖೆಯ ಅಧಿಕಾರಿಗಳು ಅಗತ್ಯ ಮಾಹಿತಿ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಆಯೋಗದ ಕಾರ್ಯಸೂಚಿಗಳು ನೆನೆಗುದಿಗೆ ಬೀಳುವಂತಾಗಿದೆ” ಎಂದು ಆರೋಪಿಸಿದರು.
“ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿಯಾಗುವವರೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಪ್ರತಿಭಟನೆಗಳು ಮಾಡಿದ ಬಳಿಕ ಸರ್ಕಾರ ಅದಕ್ಕೆ ಸ್ಪಂದಿಸಿ ನೇಮಕ ಪ್ರಕ್ರಿಯೆ ಮುಂದೂಡಿತ್ತು. ಆದರೆ ಸಚಿವ ಮಹದೇವಪ್ಪ ಸಾವಿರರು ಹುದ್ದೆಗಳನ್ನು ಭರ್ತಿ ಮಾಡುವ ತೀರ್ಮಾನ ಮಾಡಿರುವುದು ಖಂಡನೀಯ” ಎಂದರು.
“ಒಳಮೀಸಲಾತಿ ಇನ್ನೂ ಜಾರಿ ಆಗಿಲ್ಲ. ಇದೀಗ ಏಕಾಏಕಿ ಹುದ್ದೆ ಭರ್ತಿಗೆ ಮುಂದಾಗಿರುವುದು ಸರ್ಕಾಋ ದಲಿತರ ವಿರೋಧಿ ನಿಲುವು ಹೊಂದಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಸಮುದಾಯದ ಪ್ರಮುಖರಾದ ಸಚಿವರೇ, ವರದಿ ಜಾರಿಗೆ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದನ್ನು ಖಂಡಿಸಿ ಅವರ ವಿರುದ್ಧ ಹೋರಾಟ ಮಾಡಲು ದಲಿತಪರ ಸಂಘಟನೆಗಳಿಂದ ತೀರ್ಮಾನಿಸಲಾಗಿದೆ. ಎಲ್ಲ ದಲಿತಪರ ಸಂಘಟನೆಗಳು ಸರ್ಕಾರದ ಕೈಗೊಂಬೆಯಂತೆ ನಡೆಯುತ್ತಿವೆ. ಇದರಿಂದ ಸರಕಾರ ಎಸ್ಸಿ ಎಸ್ಟಿ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಪಕ್ಷಿಗಳ ಸರಣಿ ಸಾವಿನಿಂದ ಜನರಲ್ಲಿ ಆತಂಕ; ಹಕ್ಕಿಜ್ವರದ ಶಂಕೆ
ಈ ವೇಳೆ ಹೇಮರಾಜ್ ಆಸ್ಕಿಹಾಳ, ನರಸಿಂಹಲು, ತಾಯಪ್ಪ, ಲಕ್ಷ್ಮಣ, ಸೇರಿದಂತೆ ಇತರರು ಉಪಸ್ಥಿತರಿದ್ದರು.
