ರಾಯಚೂರು : ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಪಟ್ಟಣದ ಸಮಗ್ರ ಅಭಿವೃದ್ದಿಗೆ ಮುಂದಾಗಬೇಕು ಎಂದು ಆಗ್ರಹಿಸಿ ನವ ಭಾರತ ಹಿಂದೂ ದಲಿತ ಸಂಘಟನೆ ಕಾರ್ಯಕರ್ತರು ಕಾಲ್ನಡಿಗೆ ಜಾಥಾ ನಡೆಸಿದರು.
ಹಟ್ಟಿಯಿಂದ ಜಾಥಾ ಆರಂಭಿಸಿ ರಾಯಚೂರಿಗೆ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ಹಟ್ಟಿ ಪಟ್ಟಣಕ್ಕೆ 15 ದಿನಗಳ ಒಳಗಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಶಾಶ್ವತ ಕುಡಿಯುವ ನೀರಿನ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ಹಿಂದೂ ರುದ್ರಭೂಮಿಗಾಗಿ ಸ್ಥಳ ನಿಗದಿಪಡಿಸಬೇಕು” ಎಂದು ಪ್ರತಿಭಟಿಸಿದರು.
“ಹಟ್ಟಿ ಪಟ್ಟಣಕ್ಕೆ ಮಂಜೂರಾಗಿರುವ ಬಸ್ ಡಿಪೋ ಕೂಡಲೇ ಕಾರ್ಯಾರಂಭವಾಗಬೇಕು. ಲಿಂಗಸುಗೂರಿನಿಂದ ಕಲಬುರಗಿಗೆ ತೆರಳುವ ಸಾರಿಗೆ ಬಸ್‌ಗಳನ್ನು ಹಟ್ಟಿ ಮಾರ್ಗವಾಗಿ ಸಂಚರಿಸಲು ಆದೇಶಿಸಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
“ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಚುನಾವಣಾ ಬೂತ್ ಹಾಗೂ ಅಧಿಕ ಜನಸಂಖ್ಯೆಯನ್ನು ಹೊಂದಿದ ಹಟ್ಟಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೆ ಬೇಡಿಕೆ ಇಟ್ಟ ಮಾಜಿ ಸಚಿವ ವಿ ಸೋಮಣ್ಣ
ಹಟ್ಟಿ ಪಟ್ಟಣದಲ್ಲಿ ಡಿಪ್ಲೊಮಾ ಇನ್ ಮೈನಿಂಗ್ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಮಂಜೂರು ಮಾಡಬೇಕು. ಸರ್ಕಾರಿ ಜಾಗ ಅತಿಕ್ರಮಣ ಮಾಡಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು. ಹೈಟೆಕ್ ಗ್ರಂಥಾಲಯ ನಿರ್ಮಾಣದ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾಲ್ನಡಿಗೆ ಜಾಥಾದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್, ಗೌರವಾಧ್ಯಕ್ಷ ಅಮರೇಶ್, ಹಟ್ಟಿ ಘಟಕದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಭೀಮರಾಯ ಭಜೆಂತ್ರಿ, ಯಂಕೋಬ ಪವಾಡೆ ಸೇರಿದಂತೆ ಮತ್ತಿತರರು ಇದ್ದರು.