ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡಗಳ ಶೇ.17+7 ಮೀಸಲಾತಿಯನ್ನು 09ನೇ ಶೇಡ್ಯೂಲ್‌ಗೆ ಸೇರಿಸುವ ತಿದ್ದುಪಡಿ ಮಸೂದೆ ಮತ್ತು ಒಳಮೀಸಲಾತಿಗಾಗಿ ಸಂವಿಧಾನ ಪರಿಚ್ಛೇದ 341(3)ಕ್ಕೆ ತಿದ್ದುಪಡಿ ಮಸೂದೆಯನ್ನು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶದನಲ್ಲಿ ಮಂಡಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಒತ್ತಾಯಿಸಿದೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿರುವ ಸಂಘಟನೆಯ ಕಾರ್ಯಕರ್ತರು, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ.03 ಮತ್ತು ಶೇ.07ರಷ್ಟು ಮೀಸಲಾತಿ ಹೆಚ್ಚಿಸಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ನಾಗಮೋಹನ್ ದಾಸ್ ಸಮಿತಿಯ ಶಿಫಾರಸ್ಸುಗಳನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹಿಂದಿನ ಸರ್ಕಾರದ ಆದೇಶವು ಸುಪ್ರೀಂಕೋರ್ಟಿನ ಶೇ.50ರಷ್ಟು ಮೀಸಲಾತಿಯ ಮಿತಿಯನ್ನು ಮೀರಿರುವುದರಿಂದ ಮೀಸಲಾತಿಗೆ ತಿದ್ದುಪಡಿ ತಂದು ಸಂವಿಧಾನದ 09ನೇ ಶೆಡ್ಯೂಲ್‌ಗೆ ಸೇರಿಸಲು ಆ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಕೇಂದ್ರವು ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರು ಒಳ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ ಭರವಸೆಗಳು ಸುಳ್ಳಾಗಿವೆ. ಸಂಸತ್ತಿನ ಅಧಿವೇಶನದಲ್ಲಿ ಒಳ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಾರಾಯಣ ಸ್ವಾಮಿ ಅವರು ಸಂವಿಧಾನದಲ್ಲಿ ಒಳ ಮೀಸಲಾತಿಗೆ ಅವಕಾಶವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ, ಒಳಮೀಸಲಾತಿ ಜಾರಿಗೆ ತರಲು ಸಂವಿಧಾನದ 341(3)ಗೆ ತಿದ್ದುಪಡಿ ತರಬೇಕೆಂದು 2008ರಲ್ಲಿ ನ್ಯಾ. ಉಷಮೇಹರ್ ಅವರು ಹೇಳಿದ್ದರು. ಅದರಂತೆ, ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್ ಮಾರೆಪ್ಪ ವಕೀಲ, ಶಿವರಾಯ ಅಕ್ಕರಕಿ, ಜೆ.ಬಿ. ರಾಜು, ರಾಘವೇಂದ್ರ ಬೋರಡ್ಡಿ, ಹನುಮಂತಪ್ಪ ಮನ್ನಾಪೂರ, ಹೇಮರಾಜ ಅಸ್ಕಿಹಾಳ, ಹನುಮಂತ, ಎ.ರಾಮು, ಹುಲಿಗೆಪ್ಪ, ಚಂದ್ರು ಭಂಡಾರಿ, ಆಂಜನೇಯ, ಪ್ರಸಾದ್ ಭಂಡಾರಿ, ತಾಯಪ್ಪ, ಸೇರಿದಂತೆ ಅನೇಕರು ಇದ್ದರು.