ತುಂಗಭದ್ರ ಎಡದಂಡೆ ಕಾಲುವೆಯ ಕೊನೆ ಭಾಗದ ಕೃಷಿ ಭೂಮಿಗೆ ಮುಂಗಾರು ಹಂಗಾಮಿನಲ್ಲಿ ನೀರು ಹರಿಸಿ ಮೂರು ತಿಂಗಳಾದರೂ ನೂರು ಕ್ಯೂಸೆಕ್ ಸಹ ನೀರು ತಲುಪಿಲ್ಲ. ಸರ್ಕಾರ ಕೊನೆಭಾಗದ ರೈತರಿಗೆ ನೀರು ಕೊಡುವಲ್ಲಿ ವಿಫಲವಾಗಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಅಕ್ಟೋಬರ್ 16ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ನಾಲೆಯ 104 ಮೈಲ್ ಕೆಳಭಾಗದ ರೈತ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ತುಂಗಭದ್ರ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ನೀರು ಹರಿಸಲು ನೀರಾವರಿ ನಿಗಮದ ಅಧಿಕಾರಿಗಳು ವಿಫಲವಾಗಿದ್ದಾರೆ. ಕೊನೆಭಾಗ 104 ಮೈಲ್ ನಂತರ ಸರಿ ಸುಮಾರು 55 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ, ಮೆಣ ಸಿನಕಾಯಿ, ಭತ್ತ ಸೇರಿ ನಾನಾ ಬೆಳೆಗಳಿಗೆ ನೀರಿಲ್ಲದಂತಾಗಿದೆ. ನಾಲೆಯ ಮೊದಲ ಭಾಗದಲ್ಲಿ ಅಕ್ರಮ ನೀರಾವರಿ ಪ್ರದೇಶಕ್ಕೆ ನೀರು ಹರಿಸುತ್ತಿರುವ ಪರಿಣಾಮವಾಗಿ ಕೊನೆಭಾಗದ ಘೋಷಿತ ನೀರಾವರಿ ಪ್ರದೇಶಕ್ಕೆ ನೀರು ತಲುಪದಂತಾಗಿದೆ” ಎಂದು ಆರೋಪಿಸಿದರು.
“ಪ್ರತಿ ಎಕರೆ ಮೆಣಸಿನಕಾಯಿ ಬೆಳೆಗೆ ರೈತರು 50,000 ರೂ.ನಿಂದ ಲಕ್ಷ ರೂ.ವರೆಗೆ ಹಣ ಹೂಡಿದ್ದಾರೆ. ಅದರೆ, ಬೆಳೆ ಒಣಗುವ ಸ್ಥಿತಿಯಿದೆ. ಕೂಡಲೇ ಜಿಲ್ಲೆಯ ಎಲ್ಲ ಶಾಸಕರು, ಉಸ್ತುವಾರಿ ಸಚಿವರು ಕೊನೆಭಾಗಕ್ಕೆ ನೀರು ಒದಗಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಬೇಕಿದೆ. ಪ್ರತಿಬಾರಿಯೂ ಹೋರಾಟದ ಮೂಲಕವೇ ನೀರು ಪಡೆಯುವ ಪರಸ್ಥಿತಿ ನಿರ್ಮಾಣವಾಗಿದೆ” ಎಂದರು.
“ಕೊನೆಭಾಗಕ್ಕೆ ನೀರು ಒದಗಿಸಲು ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಅಗತ್ಯ ಅಧಿಕಾರಿಗಳೇ ಇಲ್ಲದೇ ಪ್ರಭಾರಿ ಮೇಲೆ ನಡೆಯುತ್ತಿದ್ದು ಕಾಲುವೆ ಪರಸ್ಥಿತಿ ನೋಡುವವರೂ ಸಹ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
“ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರೂ ನೀರು ಬರುತ್ತಿಲ್ಲ. ಜಿಲ್ಲಾಧಿಕಾರಿಗಳು, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರಿ ಆರ್ಥಿಕ ನಷ್ಟವಾಗುವ ಆತಂಕ ಎದುರಾಗಿದೆ. ಅಕ್ಟೋಬರ್ 16ರರೊಳಗೆ ಗೇಜ್ ಕಾಯ್ದುಕೊಳ್ಳದೆ ಹೊದರೆ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ,ಶರಣಪ್ಪ ಕಲ್ಮಲಾ, ಕೆ.ಬಸವರಾಜ, ಸತ್ಯನಾರಯಣ ಮರ್ಚಟ್ಹಾಳ, ವೆಂಕಟೇಶರೆಡ್ಡಿ, ಈರಪ್ಪ ಗೌಡ ಮಟಮಾರಿ, ವಿಶ್ವೇಶ್ವರಯ್ಯ, ಸೇರಿ ಅನೇಕರಿದ್ದರು.