ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಮತ್ತು ಪರಿವಾರ ಎಸ್‌ಟಿ ಸಮುದಾಯದ ನಕಲಿ ಪ್ರಮಾಣ ಪತ್ರ ಹಾವಳಿ ತಡೆಯುವುದಕ್ಕೆ ಆಯೋಗ ರಚನೆ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್ ರಘುವೀರ್ ನಾಯಕ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಪರಿಶಿಷ್ಠ ಪಂಗಡದ ತಳವಾರ ಮತ್ತು ಪರಿವಾರ ಹೆಸರಿನ ಮೇಲೆ ಹಿಂದುಳಿದ ವರ್ಗದಲ್ಲಿ ಬರುವ ಇತರೆ ಸಮುದಾಯದವರು ಎಸ್‌ಟಿ (ಪ.ಪಂಗಡ) ಪ್ರಮಾಣ ಪತ್ರ ಪಡೆದು ನೈಜ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿಯುತ್ತಿದ್ದಾರೆ. ಮುಖ್ಯವಾಗಿ ನಾಡಕಚೇರಿ ತತ್ರಾಂಶದಲ್ಲಿ ಇರುವ ದೋಷವೇ ಎಲ್ಲಾ ನಕಲಿ ಪ್ರಮಾಣ ಪತ್ರಗಳು ವಿತರಣೆಯಾಗಲು ಕಾರಣವಾಗಿದೆ” ಎಂದು ಆರೋಪಿಸಿದರು.
“ಹಿಂದುಳಿದ ವರ್ಗದಲ್ಲಿ ಬರುವ ಯಾರಾದರೂ ತಳವಾರ ಎಂದು ಅರ್ಜಿ ಸಲ್ಲಿಸಿದರೆ ಅವರಿಗೆ ಎಸ್‌ಟಿ ಪ್ರಮಾಣಪತ್ರಗಳು ವಿತರಣೆಯಾಗುತ್ತಿವೆ. ಇದರಿಂದ ಎರಡು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ನಾಡಕಚೇರಿ ತತ್ರಾಂಶದಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಎನ್ನುವ ಪದವನ್ನು ಅಲ್ಲಿಯೇ ಸೇರಿಸುವ ಮೂಲಕ ಎರಡು ಸಮುದಾಯಗಳಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
“ಈಗಾಗಲೇ ವಿತರಣೆ ಆಗಿರುವ ನಕಲಿ ಪ್ರಮಾಣ ಪತ್ರಗಳನ್ನು ಹಿಂಪಡೆಯಲು ಆಯೋಗ ರಚನೆ ಮಾಡಿ, ಎಸ್‌ಟಿಗೆ ಸೇರದ ಇತರೆ ಸಮುದಾಯದವರು ಸರ್ಕಾರದ ಅಧಿಸೂಚನೆ ಮೇರೆಗೆ ನಾಯ್ಕಡ, ನಾಯಕ ಜಾತಿ ಹೆಸರಿನಲ್ಲಿ ಪಡೆದ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಬೇಕು. ಬದಲಿಗೆ ಆಯಾ ಜಾತಿ ಪ್ರಮಾಣಪತ್ರಗಳನ್ನು ವಿತರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ʼಮಾದಕ ವ್ಯಸನದಿಂದ ಯುವಕರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಬೇಕುʼ
ಈ ವೇಳೆ ಮಲ್ಲಿಕಾರ್ಜುನ ನಾಯಕ, ರಮೇಶ ನಾಯಕ, ರಾಮು ನಾಯಕ ಹಾಗೂ ನರೇಂದ್ರ ನಾಯಕ ಇದ್ದರು.
