ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಇಂಧನ ಬೆಲೆ ಏರಿಕೆಯು ರೈತರಿಗೆ ನೇರವಾಗಿ ಹೊರೆಯಾಗುತ್ತಿದೆ. ಕೇಂದ್ರ ಸರ್ಕಾರ ಇಂಧನ ಬೆಲೆ ಹೆಚ್ಚಿಸಿದ್ದನ್ನು ವಿರೋಧಿಸಿದ್ದ ಕಾಂಗ್ರೆಸ್, ಈಗ ಇಂಧನ ಬೆಲೆ ಹೆಚ್ಚಿಸಲು ನಿರ್ಧಸಿದೆ. ಈಗಾಗಲೇ ಬೀಜ, ರಸಗೊಬ್ಬರ ಬೆಲೆ ಹೆಚ್ಚಾಗಿದೆ. ಈಗ ಇಂಧನ ಬೆಲೆ ಹೆಚ್ಚಳದಿಂದ ಉಳುಮೆ, ಕಟಾವು, ಸಾಗಾಣೆ ಬೆಲೆ ಹೆಚ್ಚಳವಾಗಲಿದೆ. ಕೃಷಿ ನಿರ್ವಹಣೆ ಹೆಚ್ಚು ಹೊರೆಯಾಗುತ್ತದೆ. ಕೂಡಲೇ ಆದೇಶವನ್ನು ಮರುಪರಿಶೀಲಿಸಬೇಕು” ಎಂದು ಆಗ್ರಹಿಸಿದರು.
“ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ನಡೆದಿದ್ದು, ತನಿಖೆ ನಡೆಯುತ್ತಿದೆ. ಭೂ ಒಡೆತನ ಯೋಜನೆಯಡಿ ಭೂಮಿ ಮಾರಿರುವ ಹಾಗೂ ಖರೀದಿಸಿರುವವರಿಗೆ ಅನುದಾನ ನೀಡಲು ಹಣವೇ ಇಲ್ಲ ಎಂದು ಹೇಳುತ್ತಿದ್ದ ನಿಗಮ, ಇಷ್ಟೊಂದು ದೊಡ್ಡ ಮೊತ್ತ ಉಳಿಸಿಕೊಂಡಿದ್ದು ಯಾಕಾಗಿ” ಎಂದು ಪ್ರಶ್ನಿಸಿದರು.
“ನಿಗಮದ ಅಧ್ಯಕ್ಷ ಬಸನಗೌಡ ದದ್ದಲ ಅಕ್ರಮ ಕುರಿತು ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ನಿಗಮದ ಅಧ್ಯಕ್ಷರಾಗಿ ನಿಗಮದಲ್ಲಿ ಏನುನಡೆಯುತ್ತಿದೆ ಎಂಬುದು ಗೋತ್ತಿಲ್ಲದೇ ಇರುವದಿಲ್ಲ. ಎಸ್‌ಟಿ ಮೀಸಲಾತಿಯಿಂದಲೇ ಶಾಸಕರಾಗಿ, ಅಧ್ಯಕ್ಷರಾಗಿದ್ದು, ಅದೇ ಸಮುದಾಯಕ್ಕೆ ಅನ್ಯಾಯ ಮಾಡಿದ್ದರೂ ಸಮ್ಮನಿದ್ದಾರೆ. ಕೂಡಲೇ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ಕೃಷಿ ಇಲಾಖೆಯಲ್ಲಿ ಅನೇಕ ಅಕ್ರಮಗಳು ನಡೆಯುತ್ತಿವೆ. ಲಿಖಿತವಾಗಿ, ಮೌಖಿಕವಾಗಿ ಅನೇಕ ದೂರುಗಳನ್ನು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆ ಸಚಿವರು, ಕಾರ್ಯದರ್ಶಿಗಳು ಶಾಮೀಲಾಗಿರುವ ಶಂಕೆಯಿದ್ದು, ಕೂಡಲೇ ಮುಖ್ಯಮಂತ್ರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕು” ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ ಪಾಟೀಲ್ ಇಂಗಳಧಾಳ, ಬೂದೆಯ್ಯ ಸ್ವಾಮಿ ಗಬ್ಬೂರು, ದೇವರಾಜನಾಯಕ, ಮಲ್ಲನಗೌಡ ದಿನ್ನಿ, ವೀರೇಶ ಪಾಟೀಲ್, ಅಮರೇಶ, ಹೊನ್ನಪ್ಪ ,ಷಣ್ಮೂಖ ಉಪಸ್ಥಿತರಿದ್ದರು.
ವರದಿ : ಹಫೀಜುಲ್ಲ