ದಲಿತರ ಏಳಿಗೆ, ಅಭಿವೃದ್ಧಿಗಾಗಿ ಸರ್ಕಾರ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ದಲಿತ ಕೇರಿಗಳ ಶೂನ್ಯ ಅಭಿವೃದ್ದಿಯಿಂದ ಜೀವನ ಸಂಕಷ್ಟದಲ್ಲಿ ಸಿಲುಕಿದೆ ಎಂದು ಎಸ್ಎಫ್‌ಐ ರಾಯಚೂರು ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಅಂಬೇಡ್ಕರ ಸರ್ಕಲ್‌ನಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ 68ನೇ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ʼಸಂವಿಧಾನ ಉಳಿಯಲಿ ಮನುವಾದ ಅಳಿಯಲಿʼ ಎನ್ನು ಘೋಷಣೆಯೊಂದಿಗೆ ಮಾತನಾಡಿದರು.
“ಕಳೆದ 2 ಸಾವಿರ ವರ್ಷಗಳಿಂದ ದಲಿತರು ಭೂಮಿಯ ಮೇಲಿನ ಹಕ್ಕನ್ನು ಹೊಂದದೆ, ವ್ಯವಸಾಯ ಮಾಡಲಾಗದೆ, ಜಮೀನುದಾರರು, ಭೂಮಾಲೀಕರ ಜಮೀನುಗಳಲ್ಲಿ ಕೂಲಿಗಳಾಗಿಯೇ, ಜೀತಾದಾಳಗಿಯೇ ಜೀವನ ನಡೆಸುವಂತಾಗಿದೆ. ದಲಿತರ ಏಳಿಗೆಗೆ ಸರ್ಕಾರಗಳು ಅನುದಾನ ಮೀಸಲಿಟ್ಟಿದ್ದರೂ, ಸಮರ್ಪಕ ಬಳಕೆಯಾಗುತ್ತಿಲ್ಲ” ಎಂದು ಆರೋಪಿಸಿದರು.
“ದಲಿತರನ್ನು ಮುಖ್ಯವಾಹಿನಿಗೆ ತರಲು, ಶೋಷಣೆಯಿಂದ ವಿಮೋಚನೆಗೊಳಿಸಲು ಇನ್ನಷ್ಟು ಹೋರಾಟಗಳನ್ನು ತೀವ್ರಗೊಳಿಸಬೇಕು. ಕೇಂದ್ರ ಸರ್ಕಾರ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುವ ಪರಿಶಿಷ್ಟರ ವಿಶೇಷ ಘಟಕ ಯೋಜನೆಗಳ ಕಾಯಿದೆ ಜಾರಿಗೊಳಿಸುವಂತೆ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ತಿದ್ದುಪಡಿ ಮಸೂದೆ ಅಂಗೀಕರಿಸಲು ಒತ್ತಾಯಿಸಬೇಕು” ಎಂದು ಕರೆ ನೀಡಿದರು.
“ಸಮಾಜದಲ್ಲಿ ದಲಿತ ಮಹಿಳೆಯರು, ವಿಮುಕ್ತ ದೇವದಾಸಿಯರು, ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸುತ್ತಿಲ್ಲ” ಎಂದು ಆಳುವ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ದಲಿತ ಹಕ್ಕುಗಳ ಸಮಿತಿಯ ತಾಲೂಕು ಮುಖಂಡ ನಿಂಗಪ್ಪ ಎಂ ವೀರಾಪೂರು ಮಾತನಾಡಿ, “ಪ್ರತಿ 3 ತಾಸಿಗೆ ಒಬ್ಬ ದಲಿತನ ಹತ್ಯೆಯಾಗುತ್ತಿದ್ದರೆ, ಪ್ರತಿ ಎರಡೂವರೆ ತಾಸಿನಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ. ದಲಿತರ ಆಹಾರದ ಹಕ್ಕನ್ನು ಕಸಿಯಲಾಗುತ್ತಿದೆ. ಆಳುವ ಸರ್ಕಾರಗಳ ತುಳಿತಕ್ಕೆ ಒಳಗಾದ ದಲಿತರಿಗೆ ಭೂಮಿಯ ಹಕ್ಕು, ಶೈಕ್ಷಣಿಕ ಹಕ್ಕು ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ| ಬಸನಗೌಡ ಪಾಟೀಲ ಯತ್ನಾಳರನ್ನು ಶಾಸಕ ಸ್ಥಾನದಿಂದ ಉಚ್ಚಾಟಿಸಿ: ಜಾಗತಿಕ ಲಿಂಗಾಯತ ಮಹಾಸಭಾ
“ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗಾಗಿ ನೀಡಿರುವ ಎಲ್ಲ ಹಕ್ಕುಗಳು ಸಮರ್ಪಕ ಜಾರಿಯಾಗಬೇಕು. ಗ್ರಾಮೀಣ ಭಾಗದ ದಲಿತರ ಕಾಲೋನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು, ರಸ್ತೆ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ” ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿಐಟಿಯು ಮುಖಂಡ ಮೈನುದ್ದೀನ್ ಟೈಲರ್, ಮುಖಂಡರಾದ ಹನೀಫ್, ದಾವೂದ್, ಅಲ್ಲಾಭಕ್ಷ ದೇವಪೂರ್, ಚೆನ್ನಬಸವ ಅಂಬೇಡ್ಕರ್ ನಗರ, ಹಾಜಿಬಾಬು ಕಟ್ಟಿಮನಿ, ಲಾಲ್ ಸಾಬ್, ರಿಯಾಜ್ ಖುರೇಶಿ, ಮಹಿಬೂಬ್ ಖುರೇಷಿ, ಮಹ್ಮದ್, ಮಯ್ಯಾ, ಪಯಾಜ್, ನಾಗರಾಜ್, ನಜೀರ್, ದಾದಾ ಬ್ಯಾಂಕ್, ದೌಲತ್, ಶಿವಪುತ್ರ ಹೊಸಮನಿ, ಖಾಜಾ ಹುಸೇನ್ ಸೇರಿದಂತೆ ಅನೇಕರು ಇದ್ದರು.
