ರಾಜ್ಯದ ಹಲವೆಡೆ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜುರಾತಿ ನೀಡುವ ಮೂಲಕ ಬದುಕಿನ ಗ್ಯಾರಂಟಿ ನೀಡಬೇಕು ಎಂದು ಭೂಮಿ ವಸತಿ ಹೋರಾಟ ಸಮಿತಿಯ ರಾಜ್ಯ ಸದಸ್ಯ ಮಾರೆಪ್ಪ ಹರವಿ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡ ಜನರಿಗೆ ಹಲವಾರು ಗ್ಯಾರಂಟಿಗಳನ್ನು ನೀಡುವ ಮೂಲಕ ಆಸರೆಯಾಗಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಆಧರಿಸಿ ಬದುಕುವುದಕ್ಕಿಂತ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಫಾರಂ ನಂಬರ್ 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ಮಾಡುವ ಮೂಲಕ ಬದುಕಿನ ಗ್ಯಾರಂಟಿ ನೀಡಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.
“ರಾಜ್ಯದಲ್ಲಿ ಲಕ್ಷಾಂತರ ಭೂರಹಿತರು ಸರ್ಕಾರಿ ಗೋಮಾಳ, ಸರ್ಕಾರಿ ವಿರಾಜ್, ಪರಂಬೋಕು, ಇನಾಂ, ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಭೂಮಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಭೂಮಿಯ ಮೇಲಿನ ಹಕ್ಕಿಗಾಗಿ ಕಳೆದ ಹಲವು ದಶಕಗಳಿಂದಲೂ ಹೋರಾಡುತ್ತಾ 30 ಲಕ್ಷಕ್ಕೂ ಅಧಿಕ ಕುಟುಂಬಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರಗಳು ಈವರೆಗೆ ನೀಡಿರುವ ಭರವಸೆಗಳು ನೀರಿನ ಮೇಲಿನ ಗುಳ್ಳೆಯಂತಾಗಿದೆ” ಎಂದು ಆರೋಪಿಸಿದರು.
“ಕಳೆದ ಬಾರಿ ಬಿಜೆಪಿ ಸರ್ಕಾರ ಬಡ ಜನರ ಭೂಮಿಯ ವಿಷಯವನ್ನು ನಿರ್ಲಕ್ಷ್ಯ ಮಾಡಿದ್ದು, ಬೃಹತ್ ಕಂಪನಿಗಳಿಗೆ ಎಸ್ಟೇಟ್ ಮಾಲೀಕರಿಗೆ, ಮಠಮಾನ್ಯಗಳಿಗೆ ನೀಡಿತ್ತು. ಅಷ್ಟೇ ಅಲ್ಲದೇ ಬಲಾಢ್ಯರು ಟ್ರಸ್ಟ್ ಹೆಸರಿನಲ್ಲಿ ರಾಜಕಾರಣಿಗಳು ತಮ್ಮ ಹೆಸರು ಹಾಗೂ ಬೇನಾಮಿ ಹೆಸರಿನಲ್ಲಿ ಸರ್ಕಾರಿ ಭೂಮಿಗಳನ್ನು ವಶ ಮಾಡಿಕೊಂಡಿದ್ದಾರೆ” ಎಂದು ಆಪಾದಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ಭೂಗಳ್ಳರಿಗೆ ಬೆಂಬಲ; ಆರೋಪ
“ಹಲವು ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ತಾತ್ಕಾಲಿಕವಾಗಿ ವಾಸವಾಗಿರುವ ಬಡವರು ಸೂರಿಗಾಗಿ ಕಾಯುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ರಾಜ್ಯದಲ್ಲಿ ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಬಡವರಿಗೆ ಭೂಮಿ ಮಂಜೂರಾತಿ ನೀಡಿ ಬಡವರ ಪರ ಆಡಳಿತ ನಡೆಸಬೇಕು” ಎಂದು ಮನವಿ ಮಾಡಿದರು.
ಆಂಜಿನೆಯ್ಯ ಕುರುಬದೊಡ್ಡಿ, ರಂಗಾರೆಡ್ಡಿ, ಹನುಮಂತ ಜೋಗಿ, ನರಸಿಂಹಲು ಕುರುಬದೊಡ್ಡಿ, ಬಂಗಾರಿ ನರಸಿಂಹಲು ಗುಂಜಳ್ಳಿ ಇದ್ದರು.