ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ಬಿಜೆಪಿ ಜೆಡಿಎಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದು, ದಿವಾಳಿಯಾಗಿದ್ದು ರಾಜ್ಯ ಕಾಂಗ್ರೆಸ್‌ನಿಂದಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ-ಜೆಡಿಎಸ್‌ನವರೇ ಕಾರಣವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ನಾಮಫಲಕ ಅನಾವರಣ, ಬುಡಕಟ್ಟು ಉತ್ಸವ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 936 ಕೋಟಿ ರೂ. ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, 371(ಜೆ)ಕಾಯ್ದೆ ದಶಮಾನೋತ್ಸವ ಸಾಧನೆ ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.
‘ಬಿಜೆಪಿಮತ್ತು ಜೆಡಿಎಸ್‌ನವರು ಬಾಯಿ ಬಂದಂತೆ ಮಾತನಾಡಿದರೆ ಗೌರವ ಕಡಿಮೆಯಾಗುತ್ತದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದರಿಂದ ರಾಜ್ಯ ದಿವಾಳಿಯಾಗಿದೆ ಎಂದು ಹೇಳುವಾಗ ಒಂದು ವಿಧಾನಸಭಾ ಕ್ಷೇತ್ರಕ್ಕೆ 936 ಕೋಟಿ ರೂ ಅನುದಾನ ನೀಡುವುದಾದರೆ ದಿವಾಳಿಯಾಗಿದೆಯೇ’ ಎಂದು ಪ್ರಶ್ನಿಸಿದರು.
2018 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 600 ಭರವಸೆ ಕೊಟ್ಟಿದ್ದರು.. ಆದರೆ ಶೇ.10 ರಷ್ಟು ಸಹ ಈಡೇರಿಸಲು ಆಗಲಿಲ್ಲ. 2013 ರಲ್ಲಿ ಅಧಿಕಾರಕ್ಕೆ ಬಂದಾಗ ನಮ್ಮ ಸರ್ಕಾರ 165 ಭರವಸೆಗಳಲ್ಲಿ ,158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರಲ್ಲಿ 597 ಭರವಸೆ ನೀಡಿದ್ದು ಎರಡು ವರ್ಷದಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಮೂರು ವರ್ಷದಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಕೊಟ್ಟ ಭರವಸೆ ಉಳಿಸಿಕೊಂಡಿದ್ದು ಕಾಂಗ್ರೆಸ್ ಸರ್ಕಾರ’ ಎಂದರು.

371(ಜೆ) ಕಾಯ್ದೆ ಜಾರಿಗೊಳಿಸಿದ್ದು ಬಿಜೆಪಿ ಜೆಡಿಎಸ್‌ನವರಲ್ಲ. ಮಲ್ಲಿಕಾರ್ಜುನ ಖರ್ಗೆಯವರು ನೇತೃತ್ವ ಕಾಂಗ್ರೆಸ್ ಸರ್ಕಾರ. ಇಲ್ಲಿಯವರೆಗೆ 13 ಸಾವಿರ ಕೋಟಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಇಲ್ಲಿಯವರಗೆ ನೀಡಿದ್ದೇವೆ. ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲು ನೀಡಿದ್ದು ಕಾಂಗ್ರೆಸ್ ಎಂಬುದನ್ನು ಮರೆಯಬಾರದು. ಕಲ್ಯಾಣ ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದಾರೆ. ಬಿಜೆಪಿ ಜೆಡಿಎಸ್‌ನವರ ಅಪಪ್ರಚಾರಕ್ಕೆ ಈ ಭಾಗದ ಜನರು ನಂಬಬೇಡಿ ಬರೀ ಸುಳ್ಳೇ ಅವರ ಮನೆ ದೇವರು, ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಪ್ರಶ್ನಿಸಲಿ? ಅವರಿಗೆ ಧೈರ್ಯವೇ ಇಲ್ಲ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ಕೂಡ ಆಡಳಿತ ಮಾಡಿದೆ. ಆದರೆ ಕರ್ನಾಟಕ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರೂ ತುಟಿ ಬಿಚ್ಚಿಲ್ಲ. 14ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾದರು ಯಾರು ಪ್ರಶ್ನೆ ಮಾಡಿಲ್ಲ. 15ನೇ ಹಣಕಾಸು ಯೋಜನೆಯಲ್ಲಿಯೂ ಅನ್ಯಾಯವಾಯಿತು. 80 ಸಾವಿರ ಕೋಟಿ ರೂ ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡಿತು. 11,490 ಕೋಟಿ ರೂ ವಿಶೇಷ ಅನುದಾನ ನೀಡಲು ಕೇಳಿದರೂ ಕೊಡಲಿಲ್ಲ. ಬಿಜೆಪಿ ಮಾಡಿದ ಅನ್ಯಾಯ ಅಷ್ಟಿಷ್ಟಲ್ಲ. ಎರಡು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. 16ನೇ ಹಣಕಾಸು ಯೋಜನೆಯಲ್ಲಿ ಇದ್ದರೂ ಅನ್ಯಾಯ ಸರಿಪಡಿಸಲಿ, ದೆಹಲಿಗೆ ಹೋಗಿ ಪ್ರಧಾನಿ, ಹಣಕಾಸು ಸಚಿವರನ್ನು ಭೇಟಿ ಮಾಡಿ ಚರ್ಚಿಸುವೆ’ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು| ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘ ಚುನಾವಣೆ: ಸಿಐಟಿಯು ಭರ್ಜರಿ ಗೆಲುವು
ಸಮಾರಂಭದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಇಂಧನ ಸಚಿವ ಕೆ.ಜೆ.ಜಾರ್ಜ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್, ಸಂಸದ ಜಿ.ಕುಮಾರ ನಾಯಕ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪೂರು, ಮಸ್ಕಿ ಶಾಸಕ ಬಸನಗೌಡ ತುರವಿಹಾಳ, ಯಾದಗಿರಿ ಶಾಸಕ ಚೆನ್ನಾರೆಡ್ಡಿ, ತನ್ನೂರು, ಮಾನ್ವಿ ಶಾಸಕ ಹಂಪಯ್ಯ ನಾಯಕ ಸಾಹುಕಾರ, ವಿಧಾನ ಪರಿಷತ್ ಸದಸ್ಯ ಡಾ,ಚಂದ್ರಶೇಖರ್, ಮಾಜಿ ಸಚಿವ ಅಮರೇಗೌಡ ಭಯ್ಯಾಪೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಗ್ಯಾರಿಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಮೆರೋಜ್ ಖಾನ್, ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಜಿಲ್ಲಾಧಿಕಾರಿ ಕೆ.ನಿತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಗ್ಯಾರೆಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಆರ್‌ಡಿಎ ಅಧ್ಯಕ್ಷ ರಾಜಶೇಖರ್ ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡರಾದ ಡಾ.ರಝಾಕ್ ಉಸ್ತಾದ್, ತಾಲ್ಲೂಕ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಪವನ ಪಾಟೀಲ್ ಸೇರಿದಂತೆ ಅನೇಕರಿದ್ದರು.

