ಹಿಂದುಳಿದ ವರ್ಗಗಳ ಗಣತಿ ನಡೆಸಿ ಸಲ್ಲಿಸಲಾಗಿರುವ ಎಚ್ ಕಾಂತರಾಜ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಏನೇ ವಿರೋಧಗಳಿದ್ದರೂ ವರದಿ ಮಂಡನೆ ನಂತರ ಪರಿಶೀಲಸಬೇಕೆಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಆಗ್ರಹಿಸಿದ್ದಾರೆ.
ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 168ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಲಾಗಿರುವ ವರದಿಯನ್ನು ಸರ್ಕಾರ ಅಂಗೀಕಾರಗೊಳಿಸುವ ಮುನ್ನವೇ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ವರದಿಯ ಜಾತಿವಾರು ಅಂಕಿ ಅಂಶಗಳೇ ಬಹಿರಂಗಗೊಂಡಿಲ್ಲ. ಆಯೋಗದ ಕಾರ್ಯದರ್ಶಿ ಸಹಿಯಿಲ್ಲ. ವರದಿಯೇ ಇಲ್ಲ ಎಂದು ಆರೋಪಿಸಲಾಗುತ್ತಿದೆ.
ಆದರೆ, ಶಾಶ್ವತ ಹಿಂದುಳಿದ ಆಯೋಗದ ಆಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು ಪೂರ್ಣ ವರದಿ ನೀಡಲು ಸಿದ್ದತೆಯಲ್ಲಿದ್ದಾರೆ. ಆದರೆ, ಬಲಾಡ್ಯ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ವಿರೋಧ ಏನಿದ್ದರೂ ಮೊದಲು ಆಯೋಗ ವರದಿ ಮಂಡಿಸಿ ಬಹಿರಂಗಪಡಿಸಬೇಕೆಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ಲಕ್ಷ 13ಸಾವಿರ ನೌಕರರು ನಡೆಸಿರುವ ಸಮೀಕ್ಷಾ ವರದಿಯನ್ನು ಯಾರದೋ ಒತ್ತಡಕ್ಕೆ ಮಣಿಯದೇ ಹಿಂದುಳಿದ, ಅಲ್ಪಸಂಖ್ಯಾತರ, ದಲಿತರು ಸೇರಿದಂತೆ ಸಮುದಾಯ ನಿಖರ ಅಂಕಿ-ಅಂಶಗಳನ್ನು ಪಡೆಯಲು ಆಯೋಗ ವರದಿ ಮಂಡಿಸಬೇಕು ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಸೇರಿದಂತೆ ಅನೇಕ ಸಚಿವರುಗಳು, ಶಾಸಕರುಗಳು ವಿರೋಧಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿಯೇ ಹೇಳಿರುವದು ಸ್ವಾಗತಾರ್ಹವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಪ್ರವರ್ಗ 1 ಮತ್ತು 2ಎನಲ್ಲಿ ಬರುವ ಹಿಂದುಳಿದ ಜಾತಿಗಳಿಗೆ ಸರ್ಕಾರ ಕಾಮಗಾರಿಗಳಲ್ಲಿ ಒಂದು ಕೋಟಿ ರೂ. ಕಾಮಗಾರಿ ಶೇ.19 ಮೀಸಲಾತಿ ನೀಡಲು ನಿರ್ಧರಿಸಿರುವುದನ್ನು ಅವರು ಸ್ವಾಗತಿಸಿದರು.
ಈ ಕುರಿತು ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಹಿಂದುಳಿದ ವರ್ಗಗಳ ಅನೇಕ ನಿಗಮಗಳನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ, ಯಾವುದೇ ಅನುದಾನ ನಿಡಿಲ್ಲ. ಬಲಿಷ್ಠ ಸಮುದಾಯಗಳಿಗೆ 500ಕೋಟಿ ಅನುದಾನ ನೀಡಲಾಗಿತ್ತು. ಜನಸಂಖ್ಯೆಯಲ್ಲಿ ಅತಿ ಹೆಚ್ಚು ಇರುವ ಹಿಂದುಳಿದ ಸಮೂದಾಯಗಳ ನಿಗಮಕ್ಕೆ 120ಕೋಟಿ ರೂ. ಅನುದಾನ ನೀಡಲು ಮನವಿ ಸಲ್ಲಿಸುತ್ತೇವೆ ಎಂದರು.
ವಕೀಲ ಶ್ರೀಕಾಂತ ಮಾತನಾಡಿ 2015ರಿಂದ 2018ರವರೆಗೆ ನಡೆದಿರುವ ಕಾಂತರಾಜ ಆಯೋಗ ಜಾರಿಗೆ ಬಲಿಷ್ಠ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿರುವದು ಕಳವಳಕಾರಿಯಾಗಿದೆ. ಆಯೋಗ ವರದಿಯಲ್ಲಿ ಏನಿದೆ ಎಂದು ಗೋತ್ತಿಲ್ಲ. ಮಂಡನೆಗೆ ಸುಖಾಸುಮ್ಮನೆ ವಿರೋಧಿಸಲಾಗುತ್ತದೆ. ಆಯೋಗ ವರದಿಯಿಂದ ಅನೇಕ ಸಮುದಾಯಗಳ ಮಾಹಿತಿ ದೊರೆಯಲಿದೆ. ಜನಗಣತಿಯೂ ನಡೆಯದೇ ಇರುವಾಗ ಜಾತಿಗಣತಿಯಿಂದ ದೊರೆಯುವ ಮಾಹಿತಿ ಆಧಾರಿಸಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ವಿರೋಧಿಸುವವರು ವರದಿ ಮಂಡನೆಗೆ ಅವಕಾಶ ನೀಡಬೇಕೆಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ, ಜಂಬಣ್ಣ ಯಕ್ಲಾಸಪುರು, ಭಾಸ್ಕರ ಇಟಗಿ, ಬಿ.ಬಸವರಾಜ, ಆಂಜಿನೇಯ್ಯ ಸೇರಿ ಅನೇಕರಿದ್ದರು.