ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಬಹಳ ಮೊದಲೇ ಅಂದರೆ, 1940ರ ಡಿಸೆಂಬರ್‌ನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಕಾಲಾನಂತರದಲ್ಲಿ ಪಕ್ಷ ಭೇದ ಬದಿಗೊತ್ತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಸ್ಥೆಯ ವ್ಯವಸ್ಥಿತ ಬೆಳವಣಿಗೆಗೆ ತಮ್ಮ ಕೊಡುಗೆಗಳನ್ನು ನೀಡಿವೆ ಎಂದು ಕಾಂಗ್ರೆಸ್ ಸಂಸದ ಜಿ ಕುಮಾರ್ ನಾಯಕ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ‘X’ ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಇಂದು, ಎಚ್‌ಎಎಲ್‌ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಇದು 2,100 ಎಕರೆಗಿಂತಲೂ ಹೆಚ್ಚು ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ಕರ್ನಾಟಕವು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ದೇಶದ ರಕ್ಷಣಾ ಉತ್ಪಾದನೆಯ ಶೇ.65ರಷ್ಟು ಕೊಡುಗೆ ನೀಡುವ ಜತೆಗೆ ವಿಶ್ವದ ಏರೋಸ್ಪೇಸ್ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿದೆ” ಎಂದರು.
“ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಕರ್ನಾಟಕದಿಂದ ಎಚ್‌ಎಎಲ್‌ನ ಒಂದು ಘಟಕವನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಇದು ನಿಜವಾದರೆ, ತೀವ್ರ ಆತಂಕಕಾರಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
Hindustan Aeronautics Limited (HAL) was established in Bengaluru in December 1940—well before India gained independence. Over the decades, the entire #HAL ecosystem was built meticulously by successive Central Governments and actively supported by the Government of Karnataka,… pic.twitter.com/rT4ZADVDUv
— G Kumar Naik (@IamGKumarNaik) May 27, 2025
“ಎಚ್‌ಎಎಲ್ ಕೇವಲ ಒಂದು ಸಂಸ್ಥೆಯಲ್ಲ. ಇದು ಕರ್ನಾಟಕದ ಕೈಗಾರಿಕಾ ಪರಂಪರೆಯ ಸಂಕೇತ ಮತ್ತು ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದ ಆಸ್ತಿಯಾಗಿದೆ. ಇದನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಕನ್ನಡಿಗರು ಒಗ್ಗಟ್ಟಿನಿಂದ ವಿರೋಧಿಸುತ್ತಾರೆ. ನಮ್ಮ ರಾಜ್ಯವನ್ನು ದುರ್ಬಲಗೊಳಿಸುವ ಮತ್ತು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಕುಂಠಿತಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮವನ್ನು ನಾವು ಸಹಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏನಿದು ಘಟನೆ?
ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು NDA ಮಹತ್ವದ ಮಿತ್ರಪಕ್ಷವಾಗಿರುವ ಎನ್ ಚಂದ್ರಬಾಬು ನಾಯ್ಡು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL)ನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್(AMCA) ಮತ್ತು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್(LCA)ಗಳ ಉತ್ಪಾದನಾ ಸೌಲಭ್ಯಗಳನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದಾರೆ. HALನ AMCA ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಬೆಂಗಳೂರು ವಿಮಾನ ನಿಲ್ದಾಣದಿಂದ ಒಂದು ಗಂಟೆ ದೂರದಲ್ಲಿರುವ ಲೇಪಾಕ್ಷಿ-ಮಡಕಶಿರ ಕೇಂದ್ರದಲ್ಲಿ 10,000 ಎಕರೆಗಳನ್ನು ಅವರು ನೀಡಿದ್ದಾರೆ.