ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೈತರು ನೀಡಿದ ಮೂಲ ಭೂಮಿಗೆ ದುಡ್ಡು ಕೊಡಬೇಕಿತ್ತು. ಹೆದ್ದಾರಿ ಪ್ರಾಧಿಕಾರ ರೈತರಿಗೆ ದುಡ್ಡು ನೀಡದೆ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ರೈತರ ಪಟ್ಟು ಹಿಡಿದಾಗ ರೈತರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆದ ಘಟನೆ ಮಸ್ಕಿ ತಾಲ್ಲೂಕಿನ ಗೋನವಾರ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.
ಭಾರತ ಮಾಲಾ ಯೋಜನೆ ಅಡಿಯಲ್ಲಿ ಬೆಳಗಾವಿ–ರಾಯಚೂರು ರಾಷ್ಟ್ರೀಯ ಹೆದ್ದಾರಿ–748ಎ ನಿರ್ಮಾಣಕ್ಕಾಗಿ ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕನಿಷ್ಠ ಕಾನೂನು ನಿಯಮಗಳನ್ನು ಪಾಲಿಸುತ್ತಿಲ್ಲ. ನಿಯಮ ಉಲ್ಲಂಘಿಸಿದ ಅಧಿಕಾರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಅವೈಜ್ಞಾನಿಕವಾಗಿ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ. ಭೂ ಸಂತ್ರಸ್ತರಿಗೆ ಆಕ್ಷೇಪಣೆ ಆಲಿಸದೇ ಅನ್ಯಾಯ ಮಾಡಲಾಗಿದೆ. ಸರಿಯಾಗಿ ಅಳತೆ ಹಾಗೂ ಖರೀದಿಸಿದ ಜಮೀನಿನ ದುಡ್ಡನ್ನು ಕೊಡದೆ ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಸುಳಿವು ನೀಡದೇ ಅಧಿಕಾರಿಗಳು ರೈತರು ಬೆಳೆದ ಬೆಳೆಗಳನ್ನು ನಾಶಪಡಿಸಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಇದನ್ನು ರೈತರು ಪ್ರಶ್ನಿಸಿದ್ದಕ್ಕೆ ಪೊಲೀಸರ ಸಮ್ಮುಖದಲ್ಲಿ ದೌರ್ಜನ್ಯ ನಡೆಸಿದ್ದಾರೆ ಎಂದು ರೈತ ಮುಖಂಡ ಶರಣಪ್ಪ ಉದ್ಭಾಳ ಕಿಡಿಕಾರಿದರು.
ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕಾಮಗಾರಿ ನಡೆಸಲು ನ್ಯಾಯಾಲಯಕ್ಕೆ ದಾವೆ ಹೂಡಿದ್ದೇವೆಂದು ಹೇಳುತ್ತಿದ್ದಾರೆ. ನ್ಯಾಯಾಲಯದಿಂದ ಯಾವುದೇ ನೋಟಿಸ್ ರೈತರಿಗೆ ಹಿಂಬರಹ ಬಂದಿಲ್ಲವೆಂದು ರೈತರು ತಡೆದು ಪ್ರತಿಭಟಿಸಿದಾಗ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ರೈತರನ್ನು ಒಕ್ಕಲೆಬ್ಬಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ‘ಕೆಸರಲ್ಲಿ ಶಾಲೆಯೋ, ಶಾಲೆಯಲ್ಲಿ ಕೇಸರೋʼ
ಲಿಂಗಸೂಗೂರು ಸಹಾಯಕ ಆಯುಕ್ತರ ಜೊತೆ ಎರಡು ಬಾರಿ ಸಭೆ ನಡೆದಾಗ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಆರಂಭಿಸುತ್ತೇವೆ ಅಲ್ಲಿಯವರೆಗೂ ಯಾವುದೇ ಕಾಮಗಾರಿಗೆ ಮುಂದಾಗಲ್ಲ ಎಂದು ಲಿಖಿತ ರೂಪದಲ್ಲಿ ನೀಡಿದರು. ಅದನ್ನು ಲೆಕ್ಕಿಸದೆ ಇಂದು ಏಕಾಏಕಿ ರೈತರ ಜಮೀನುಗಳಿಗೆ ನುಗ್ಗಿ ಕೆಲಸ ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
