ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ, ಎಐಯುಟಿಯುಸಿ ನೇತೃತ್ವದಲ್ಲಿ ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
“ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿಗಳಿಗೆ 3 ತಿಂಗಳ ಬಾಕಿ ವೇತನ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಮಿಕರಿಗೆ 3 ತಿಂಗಳ ಬಾಕಿ ವೇತನ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಿಬ್ಬಂದಿಯವರಿಗೆ ಬಾಕಿಯಿರುವ 1 ತಿಂಗಳ ವೇತನವನ್ನು ಕೂಡಲೇ ಪಾವತಿ ಮಾಡಬೇಕು” ಎಂದು ಆಗ್ರಹಿಸಿದರು.
“ಎಲ್ಲ ಇಲಾಖೆಗಳ ಕಾರ್ಮಿಕರಿಗೆ ಇಎಸ್‌ಐ ಕಾರ್ಡ್, ಆದೇಶ ಪ್ರತಿ, ಗುರುತಿನ ಚೀಟಿ, ಸಮವಸ್ತ್ರಗಳನ್ನು ವಿತರಿಸಬೇಕು. ಎಲ್ಲ ಇಲಾಖೆಯ ಕಾರ್ಮಿಕರಿಗೆ ವೇತನ ಪಾವತಿ ಮಾಡಿರುವ ವೇತನ ಚೀಟಿ ಪ್ರತಿ ತಿಂಗಳು ನೀಡಬೇಕು. ಎಲ್ಲ ಇಲಾಖೆಯ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯನ್ವಯ ವಾರಕ್ಕೆ ಒಂದು ರಜೆ ನೀಡಬೇಕು. ರಜೆ ಪಡೆಯದ ಕಾರ್ಮಿಕರಿಗೆ ಆ ದಿನದ ದುಪ್ಪಟ್ಟು ಕೂಲಿ ಪಾವತಿ ಮಾಡಬೇಕು” ಎಂದು ಒತ್ತಾಯಿಸಿದರು.
ದಿನಕ್ಕೆ 8 ಗಂಟೆ ಅವಧಿ ದುಡಿಮೆ ಹಾಗು ದಿನದ 8 ಗಂಟೆ ನಂತರದ ಹೆಚ್ಚುವರಿ ದುಡಿಮೆಗೆ ಹೆಚ್ಚುವರಿ ವೇತನ(ಓಟಿ) ಪಾವತಿ ಮಾಡಬೇಕು.ಹೊರಗುತ್ತಿಗೆ ಖಾಸಗಿ ಏಜೆನ್ಸಿಗಳ ಶೋಷಣೆ ತಪ್ಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 6ರಿಂದ ರಾತ್ರಿ 8ರ ವರೆಗೆ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿರುವುದನ್ನು ಹಿಂಪಡೆಯಬೇಕು. ದಿನದ 8 ಗಂಟೆ ನಂತರದ ಹೆಚ್ಚುವರಿ ದುಡಿಮೆಗೆ ಹೆಚ್ಚುವರಿ ವೇತನ(ಓಟಿ) ಪಾವತಿ ಮಾಡಬೇಕು” ಎಂದು ಒತ್ತಾಯಿಸಿದರು.
“ಕಾರ್ಮಿಕ ಕಾಯ್ದೆಯನ್ವಯ ಸರ್ಕಾರ ಘೋಷಿತ ಸಾರ್ವತ್ರಿಕ ರಜೆ, ಸಾರ್ವಜನಿಕ ಹಬ್ಬದ ದಿನದಂದು ಸೇವೆ ಸಲ್ಲಿಸುವ ಕಾರ್ಮಿಕರಿಗೆ ಆ ದಿನದ ದ್ವಿಗುಣ ದರದಲ್ಲಿ ವೇತನ ಪಾವತಿ ಮಾಡಬೇಕು. ಕಾರ್ಮಿಕರ ವೇತನದಲ್ಲಿ ಕಟಾವು ಮಾಡಲಾದ ಇಪಿಎಫ್ ಮತ್ತು ಇಎಸ್‌ಐ ವಂತಿಗೆ ಮೊತ್ತವನ್ನು ಕಾರ್ಮಿಕರ ಇಪಿಎಫ್ ಮತ್ತು ಇಎಸ್‌ಐ ಖಾತೆಗಳಿಗೆ ಜಮಾ ಮಾಡಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಬೊಳಮಾನದೊಡ್ಡಿಯಲ್ಲಿ ಆರೋಗ್ಯ ರಜೆಯ ಮೇಲೆ ತೆರಳಿದ ಅಡುಗೆಯವರಾದ ನರಸಮ್ಮ ಎಂಬುವವರಿಗೆ ಅವರ ಮೊದಲ ಸ್ಥಳದಲ್ಲಿಯೇ ಸೇವೆಗೆ ನಿಯೋಜಿಸಿ ಮುಂದುವರೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಜಿಲ್ಲೆಯಲ್ಲಿ ಲಘು ಭೂಕಂಪನ; ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆ ದಾಖಲು
“ಇಲಾಖೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಪ್ರತಿ ತಿಂಗಳ 5ರ ಒಳಗಾಗಿ ಕಾರ್ಮಿಕರಿಗೆ ವೇತನ ಪಾವತಿ ಮಾಡಬೇಕು. ಎಲ್ಲ ಇಲಾಖೆಗಳಲ್ಲಿ ಮೊದಲು ಸೇವೆ ಸಲ್ಲಿಸಿದ ಕಾರ್ಮಿಕರನ್ನೇ ಸೇವಾ ಹಿರತನ ಆಧರಿಸಿ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾದ್ಯಕ್ಷ ಮಹೇಶ ಸಿ, ಕಾರ್ಯದರ್ಶಿ ಗಾಯತ್ರಿ ಎಂ, ಅಣ್ಣಪ್ಪ, ಬಸವರಾಜ, ಹನುಮರೆಡ್ಡಿ, ಮಹೇಶ್ವರಿ, ಅಂಬಿಕಾ, ಶಶಿಕುಮಾರ ಸೇರಿದಂತೆ ಅನೇಕರು ಇದ್ದರು.
