ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನಗಳು, ಒಂದು ಬ್ರಿಟಿಷರಿಂದ ಮುಕ್ತಿ ಹೊಂದಿದ್ದ ಆಗಸ್ಟ್ 15ರ ಭಾರತದ ಸ್ವಾತಂತ್ರ್ಯ ದಿನಾಚರಣೆ, ಇನ್ನೊಂದು ದೇಶದ ಒಳಗಿನ ರಾಜರ ಸುಪರ್ದಿಯಲ್ಲಿದ್ದ ಪ್ರದೇಶ ಬಿಡುಗಡೆಯಾಗಿ ಸ್ವಾತಂತ್ರ್ಯ ದೇಶದೊಳಗೆ ವಿಲೀನವಾದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ. ಹೆಚ್ಚು ಕಮ್ಮಿ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿಗೆ ಆಚರಿಸುವ ಸ್ವಾತಂತ್ರ್ಯ ಸಂಭ್ರಮ ಈ ಭಾಗದ ಜನರ ಸೌಭಾಗ್ಯ ಎನ್ನಬಹುದು.
ನಿಜಾಮರು ಆಳಿಸಿಕೊಂಡ ದಾಸ್ಯದ ಧ್ವನಿಯಾದ ‘ಹೈದರಾಬಾದ್ ಕರ್ನಾಟಕ’ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಬದಲಾಗಿದೆ. 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿತ್ತು. ಹೆಸರು ಬದಲಾಗಿ ಈಗ ನಾಲ್ಕು ವರ್ಷ ಕಳೆಯಿತು. ಆದರೆ, ಈ ಪ್ರದೇಶದ ಹೆಸರು ಬದಲಾವಣೆ ವಿಷಯದಲ್ಲಿ ಈ ಭಾಗದ ಜನರು, ಜನಪ್ರತಿನಿಧಿಗಳು ಇನ್ನಿಲ್ಲದ ಕಸರತ್ತು ನಡೆಸಿದ ಕಾರಣಕ್ಕೆ ಹೆಸರೇನೋ ಬದಲಾಗಿದೆ. ಆದರೆ, ಜನರ ಭಾವನಾತ್ಮಕ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸರ್ಕಾರ, ಇಲ್ಲಿನ ಅಭಿವೃದ್ಧಿಯ ವಿಚಾರದಲ್ಲಿ ಸ್ಪಂದಿಸಲು ಹಿಂದೇಟು ಹಾಕುತ್ತದೆ ಎಂಬುದು ಮೇಲ್ನೋಟಕ್ಕೆ ಗಮನಿಸಬಹುದು.
ಬಸವಾದಿ ಶರಣರ ತವರು ನೆಲ, ಶರಣರ ಕಲ್ಯಾಣ ಸಮಾಜದ ಪರಿಕಲ್ಪನೆ ಸೇರಿದಂತೆ ಸೂಫಿ, ಸಂತ, ತತ್ವಪದಕಾರರ ನೆಲೆವೀಡಾದ ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. ಹೆಸರು ಬದಲಾವಣೆ ಆಗಿರುವುದು ಸಮಂಜಸ. ಮರುನಾಮಕರಣ ಜೊತೆಗೆ ಈ ಭಾಗದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಈ ಪ್ರದೇಶ ದಾಸ್ಯದ ಸಂಕೋಲೆಯನ್ನು ಕಳಚುವುದಾಗಿ ಘೋಷಿಸಿದ್ದರು. ಮಾನವ ಸಂಪನ್ಮೂಲಗಾಗಿ ₹ 500 ಕೋಟಿ ಅನುದಾನವೂ ಘೋಷಿಸಲಾಗಿತ್ತು. ಈ ಘೋಷಣೆ ಅನುದಾನದಿಂದ ಅದೆಷ್ಟು ಅಭಿವೃದ್ಧಿ ಕಂಡಿದೆ ಎಂದು ಹುಡುಕಲು ಹೋದರೆ ಉತ್ತರ ದೊರಕುವುದು ತೀರ ಕಷ್ಟ.
‘ಕಲ್ಯಾಣ’ ಎಂದರೆ ಅದೊಂದು ಸ್ಥಳವಲ್ಲ, ನಿಗದಿತ ಪ್ರದೇಶದ ಹೆಸರೂ ಅಲ್ಲ. ಕಲ್ಯಾಣ ಎಂದರೆ ಒಳಿತು, ಸಮೃದ್ಧಿ, ಅಭ್ಯುದಯ, ಸರ್ವ ಸಮಾನತೆ ಸಮಾಜ, ಯಾವ ಕೊರತೆಗಳಿಲ್ಲದ ಒಂದು ಪ್ರದೇಶವನ್ನು ಕಲ್ಯಾಣ ನೆಲ ಎಂದು ಕರೆಯಬಹುದು. ಅಂಥ ‘ಜನ ಕಲ್ಯಾಣ’ಕ್ಕಾಗಿಯೇ ಶರಣರು ಕಾಯಕ ಚಳವಳಿ ಮೂಲಕ ಸಮಾನತೆ ಕನಸು ಕಂಡಿದ್ದರು. ಅಂಥ ‘ಕಲ್ಯಾಣ’ ಹೆಸರಿನೊಂದಿಗೆ ಬದಲಾದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸರ್ಕಾರಗಳು ಹಿಂದಿನಿಂದಲೂ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದ್ದಾರೆ. ಅಂದರೆ ರಾಜ್ಯದ ಉಳಿದ ಭಾಗದ ಸರ್ವಾಂಗೀಣ ಅಭಿವೃದ್ಧಿ ಕಂಡರೆ ಈ ಭಾಗ ಅದೆಷ್ಟು ‘ಕಲ್ಯಾಣ’ ವಾಗಿದೆ ಎಂಬುದು ಅರ್ಥವಾಗದೇ ಇರದು.
ಈಗ ಕಲ್ಯಾಣ ಕರ್ನಾಟಕ ವಿಮೋಚನೆಗೆ ಅಮೃತ ಮಹೋತ್ಸವ ಸಂಭ್ರಮ, ಇನ್ನು ಸಂವಿಧಾನದ 371(ಜೆ) ಕಲಂ ಜಾರಿಗೆ ದಶಮಾನೋತ್ಸವ ಸಡಗರ, ಒಂದು ಭಾಗದ ಜನರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿಯಾಗಿ “ಜನ ಕಲ್ಯಾಣ” ಹೊಂದಬೇಕಾಗಿದೆ. ಅದನ್ನು ಸರ್ಕಾರಗಳು ಕಾರ್ಯಗತಗೊಳಿಸಿದಾಗ ಮಾತ್ರ ‘ಕಲ್ಯಾಣ’ ಎಂಬ ಪದಕ್ಕೆ ಸೂಕ್ತ ಅರ್ಥ ಬರುವುದು. 371(ಜೆ) ಯಿಂದ ಶೈಕ್ಷಣಿಕವಾಗಿ ಒಂದಿಷ್ಟು ಲಾಭವಾಗಿರುವುದು ಬಿಟ್ಟರೆ ದೊಡ್ಡ ಮಟ್ಟದ ಶೈಕ್ಷಣಿಕ ಪ್ರಗತಿ ಸಾಧಿಸಲು ಆಗಲೇ ಇಲ್ಲ.
‘ಕಲ್ಯಾಣ ಕರ್ನಾಟಕ’ ಎಂದು ಹೆಸರಿಟ್ಟುಕೊಂಡ ಈ ಭಾಗದ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಕಂಡುಕೊಳ್ಳಲಿಲ್ಲ. ಸಣ್ಣ ಪುಟ್ಟ ಮಕ್ಕಳನ್ನು ಒಡಲಲ್ಲಿ ಇಟ್ಟುಕೊಂಡು ಹೊರ ರಾಜ್ಯಗಳಿಗೆ ಗುಳೆ ಹೋಗುವುದು ಇನ್ನೂ ತಪ್ಪಿಲ್ಲ. ಉದ್ಯೋಗ ಅರಸಿಕೊಂಡು ಹೋದ ಈ ಭಾಗದ ಸುಶಿಕ್ಷಿತ ವರ್ಗದಿಂದ ರಾಜಧಾನಿ, ನಗರಗಳು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತಿವೆ. ಆದರೆ ಇಲ್ಲಿರುವ ಜನರ ಜೀವನಮಟ್ಟಲ್ಲಿ ಮಾತ್ರ ಯಾವ ಸುಧಾರಣೆಯೂ ಕಾಣಲಿಲ್ಲ . ಅಭಿವೃದ್ಧಿ ಯೋಜನೆಗಳು ಜಾರಿಯಾದರೆ ಪರಿಣಾಮವಾಗಿ ಅನುಷ್ಠಾನಕ್ಕೆ ಬರಲ್ಲ. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂಥ ಜನನಾಯಕರ ಕೊರತೆಯೂ ಇದೆ ಎಂಬುದು ಸುಳ್ಳಲ್ಲ.
ಈ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಈ ಹಿಂದೆ ವರ್ಷಕ್ಕೆ 1,500 ಕೋಟಿ ವಿಶೇಷ ಅನುದಾನ ಘೋಷಿಸಿತು, ನಂತರ ಅದು 3,000 ಕೋಟಿಗೆ ಹೆಚ್ಚಾಯ್ತು. ಇದೀಗ 5 ಸಾವಿರ ಕೋಟಿ ಅನುದಾನ ಪ್ರತಿ ವರ್ಷಕ್ಕೆ ನೀಡಲಾಗುತ್ತದೆ. ಆದರೆ ದುರಾದೃಷ್ಟಕರ ಸಂಗತಿ ಏನೆಂದರೆ ಈ ಅನುದಾನ ಹೇಗೆ ಸದುಪಯೋಗ ಪಡೆದುಕೊಳ್ಳಬೇಕು ಎಂಬ ದರ್ದು ಇಲ್ಲದ ಕಾರಣಕ್ಕೇನೋ ಒಟ್ಟು ಬಜೆಟ್ ನಲ್ಲಿ ಬಳಕೆಯಾದ ಅನುದಾನದ ಹೆಚ್ಚು ಕಮ್ಮಿ ಅರ್ಧ ಹಣ ಖಜಾನೆಯಲ್ಲಿ ಹಾಗೇ ಉಳಿಯುತ್ತದೆ. ಇದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ ಎಂಬುದು ಪ್ರಜ್ಞಾವಂತರ ಪ್ರಶ್ನೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಂಡ ಈ ಭಾಗದ ಅದೆಷ್ಟೋ ಊರುಗಳಿಗೆ ಇಂದಿಗೂ ಸೂಕ್ತ ರಸ್ತೆಗಳಿಲ್ಲ, ಸಾರಿಗೆ ಸಂಪರ್ಕ ಮೊದಲೇ ಕಾಣದ ಗ್ರಾಮಗಳು ಲೆಕ್ಕವಿಲ್ಲ. ಕನಿಷ್ಠ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದ ಪರಿಣಾಮ ಬೀದರ, ರಾಯಚೂರು, ಯಾದಗಿರಿ ಸೇರಿದಂತೆ ಈ ಭಾಗದಲ್ಲಿ ಅತೀ ಹೆಚ್ಚು ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಘಟನೆ ನಡೆದಿದ್ದು ಅಷ್ಟೇ ಅಲ್ಲ, ಹಲವರು ಸಾವನ್ನಪ್ಪಿದ ಧಾರುಣ ಘಟನೆಗಳು ಇದೀಗ ತಾಜಾ ಉದಾಹರಣೆ. ಕೋಟಿಗಳಲ್ಲಿ ಬರುವ ಅನುದಾನ ಸಮರ್ಪಕವಾಗಿ ಅನುಷ್ಠಾನ ಆಗದಿದ್ದರೆ ಜನರು ಮೂಲಭೂತ ಸೌಕರ್ಯ ವಂಚಿತದಿಂದ ಜೀವ ಕಳೆದುಕೊಳ್ಳುವುದು ಸಾಮಾನ್ಯ ಎನ್ನುವಂತಾಗುತ್ತದೆ.
ಈ ಸುದ್ದಿ ಓದಿದ್ದೀರಾ?: ಸೆ.25ರಂದು ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ‘ಜನತಾ ದರ್ಶನ’ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲ. ಯುವಕರಿಗೆ ಉದ್ಯೋಗ ನೀಡುವ ದೊಡ್ಡ ಕಂಪನಿಗಳು ಇಲ್ಲ. ಬೇಸಿಗೆ ಬಂದರೆ ಸಾಕು, ಹನಿ ನೀರಿಗಾಗಿ ಪಡಬಾರದ ಕಷ್ಟಪಡುವ ಬಹುತೇಕ ಹಳ್ಳಿಗಳು ಇಲ್ಲಿ ಸರ್ವೇಸಾಮಾನ್ಯ. ಜಿಲ್ಲೆಯಿಂದ ಜಿಲ್ಲೆಗೆ ಬರೀ ಟ್ರೈನ್ ಓಡಿತು, ವಿಮಾನ ಹಾರಿದ ಮಾತ್ರಕ್ಕೆ ಅಭಿವೃದ್ಧಿ ಅಂತ ಹೇಳಬೇಕೇ? ಅದಕ್ಕೆ ಬಿಟ್ಟು ಹಲವು ತಾಪತ್ರಯಗಳು ಈ ಭಾಗದವರು ಅಂದಿನಿಂದ ಇಂದಿನವರೆಗೂ ಎದುರಿಸುಕೊಂಡೆ ಬರ್ತಿದ್ದಾರೆ. ಆದರೂ ಮಂತ್ರಿ ಮಹನೀಯರು ಮಾತ್ರ ನಾವು ಹಿಂದುಳಿದಿಲ್ಲ, ನಮ್ಮದೂ ಮುಂದುವರೆದ ಪ್ರದೇಶ ಎಂದೇ ಹೇಳಿಕೊಳ್ಳುವುದು ವಾಡಿಕೆ.
ರಾಜ್ಯದ ಮುಖ್ಯಮಂತ್ರಿಗಳು ಪ್ರತಿವರ್ಷ ಸೆಪ್ಟೆಂಬರ್ 17ಕ್ಕೆ ಕಲ್ಬುರ್ಗಿಯಲ್ಲಿ ಧ್ವಜಾರೋಹಣ ನೆರವೇರಿಸಿ ‘ಹೈದರಾಬಾದ್ ಕರ್ನಾಟಕ ವಿಮೋಚನೆ’ ಕುರಿತು ಮಾತನಾಡಿ ಸಮಸ್ಯೆಗಳು ಬಗೆಹರಿಸುವುದು, ಖಾಲಿ ಹುದ್ದೆ ಭರ್ತಿ ಮಾಡುವುದು ಸೇರಿ ಆಶ್ವಾಸನೆ ನೀಡುವುದು ಪ್ರತಿ ವರ್ಷ ನಡೆಯುತ್ತಲೇ ಇರುತ್ತದೆ. ಆದರೆ ಕಲ್ಯಾಣ ಕರ್ನಾಟಕದ ಭಾಗದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ವರ್ಷಕೊಮ್ಮೆ ಈ ಭಾಗದಲ್ಲಿ ಅಧಿವೇಶನ ನಡೆಸುವುದು. ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ಹೊರಡಿಸಿರುವುದು ಸರ್ಕಾರದ ಪ್ರಮುಖ ಕೆಲಸವಾಗಬೇಕಾಗಿದೆ.
ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ, ಕೆಕೆಆರ್ ಡಿಬಿ ಗೆ ಅನುದಾನವೂ ಘೋಷಣೆ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಸಚಿವರು ಈಗಲಾದರೂ ಈ ಭಾಗದ ಸರ್ವಾಗೀಣ ಅಭಿವೃದ್ಧಿಗೆ ಒತ್ತು ನೀಡುವ ಜೊತೆಗೆ ಅಧಿಕಾರಿಗಳು ಇಚ್ಚಾಶಕ್ತಿ ತೋರಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ನಿಯಮಗಳು ಜಾರಿಗೊಳಿಸಿದರೆ ಮಾತ್ರ ಈ ಭಾಗದ ಪ್ರಗತಿ ಸಾಧ್ಯ. ಇಲ್ಲದಿದ್ರೆ ‘ಕಲ್ಯಾಣ ಕರ್ನಾಟಕ’ ಅಭಿವೃದ್ಧಿ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಲಿದೆ.
💯 true sir