ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಐಸಿಡಿಎಸ್ ಯೋಜನೆಗೆ ಅನುದಾನ ಕಡಿತ, ಗೌರವಧನ ಹೆಚ್ಚಿಸದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರ ಘೋಷಣೆ ಮಾಡಿದ ಯೋಜನೆಗಳು ಕೇವಲ ಘೋಷಣೆಗಳಲ್ಲಿ ಮಾತ್ರ ಇದೆ. ಅನುದಾನವಿಲ್ಲದೆ ಸಮರ್ಪಕ ಅನುಷ್ಠಾನಗೊಳಿಸಲು ಹಿನ್ನಡೆಯಾಗುತ್ತಿದೆ ಎಂದು ದೂರಿದರು. ರಾಮ ರಾಜ್ಯ ಎನ್ನುವ ಸರ್ಕಾರ ಹಸಿವಿನ ಸೂಚ್ಯಾಂಕ ಸ್ಥಾನದಿಂದ ಭಾರತವನ್ನು ಮೇಲೆತ್ತಲು ಯೋಜನೆಗೆ ಅನುದಾನ ನೀಡದೇ ಯಾವ ಪ್ರಯತ್ನವನ್ನು ಬಜೆಟ್‌ನಲ್ಲಿ ಮಾಡಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಐಸಿಡಿಎಸ್‌ನಲ್ಲಿ 21,521.13 ಕೋಟಿಯಿಂದ 21,200 ಕೋಟಿಗೆ ಮಧ್ಯಂತರ ಬಜೆಟ್‌ನಲ್ಲಿ 300 ಕೋಟಿಗಿಂತ ಹೆಚ್ಚು ಬಜೆಟ್ ಕಡಿತ ಮಾಡಲಾಗಿದೆ. ಅನುದಾನ ಕಡಿತದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ವೇತನ ವಿಳಂಬ, ಬಾಡಿಗೆ ಪಾವತಿ, ಪೌಷ್ಠಿಕ ಆಹಾರಕ್ಕಾಗಿ ಹಣ ಬಿಡುಗಡೆ ನಿಗದಿತವಾಗಿ ಬಿಡುಗಡೆಯಾ ಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಕಡಿತಗೊಳಿಸುವ ಪರಿಕಲ್ಪನೆಯಿರುವ ಸರ್ಕಾರ 2 ಕೋಟಿ ತಾಯಂದಿರು, 8 ಕೋಟಿ ಮಕ್ಕಳ ಆರೋಗ್ಯ, ಆಹಾರ, ಶಿಕ್ಷಣದ ಹಕ್ಕನ್ನು ಕಾಪಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.ಕಳೆದ 5 ವರ್ಷಗಳಲ್ಲಿ 1 ರೂ. ಅನುದಾನ, ವೇತನ ಹೆಚ್ಚಳ ಮಾಡದೆ ಸಬ್ ಕಾ ವಿಕಾಸ್ ಎಂದರೆ ವಿಕಾಸ್ ವಾಗುತ್ತಿದೆಯೇ, ಸರ್ಕಾರದ ಈ ಧೋರಣೆಯನ್ನು ಖಂಡಿಸಿದರು. ಐಸಿಡಿಎಸ್ ಯೋಜನೆಗೆ ಖಡಿತಗೊಳಿಸಿರುವ ಅನುದಾನವನ್ನು ಬಿಡುಗಡೆ ಮಾಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಎಚ್.ಪದ್ಮಾ, ತಾಲೂಕಾ ಕಾರ್ಯದರ್ಶಿ ನರ್ಮದಾ, ಕೆ.ಜಿ.ವೀರೇಶ, ಡಿ.ಎಸ್. ಶರಣ ಬಸವ, ಗೋಕುರಮ್ಮ, ಪಾರ್ವತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.