ರಾಯಚೂರು ನಗರದ ಬೋಳಮಾನದೊಡ್ಡಿ ರಸ್ತೆಯ ಆಶೀರ್ವಾದ ಲೇಔಟ್ ಸೇರಿದಂತೆ ಹಲವು ಕಡೆ ಸರ್ಕಾರಿ ಭೂಮಿಯನ್ನು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ರವೀಂದ್ರ ಜಲ್ದಾರ್ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ವಿಶೇಷ ಭೂ ನ್ಯಾಯಾಲಯದ ಮಂಡಳಿಗೆ ದೂರು ನೀಡಲಾಗುವುದು ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಮಹಾವೀರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶೀರ್ವಾದ ಲೇಔಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರು 18 ಜನ ನಿವೇಶನದಾರರಿಗೆ ವಾಪಸ್ ನೀಡಬೇಕು ಎಂದು ಆದೇಶ ಮಾಡಿದ್ದಾರೆ. ರವೀಂದ್ರ ಜಲ್ದಾರ್ ಅವರು ಸರ್ವೆ ನಂಬರ್ 889/2/ಎ, 932, 897/1,3,4 ಹಾಗೂ 990 ಮತ್ತು 901ನ ಸರ್ಕಾರಿ ಭೂಮಿಯನ್ನು ಗೂಂಡಾ ಪ್ರವೃತ್ತಿಯಿಂದ ನಿವೇಶನ ಕಬಳಿಸಿ ಮನಬಂದಂತೆ ಮಾರಾಟ ಮಾಡಿದ್ದಾರೆ. ಮೂಲ ನಿವೇಶನದಾರರಿಗೆ ನ್ಯಾಯಾಧೀಶರು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ರವೀಂದ್ರ ಜಲ್ದಾರ್ ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಐಟಿ ಮತ್ತು ಇ.ಡಿಗೆ ದಾಖಲೆ ಸಮೇತ ದೂರು ನೀಡಿದರೂ ಇದುವರೆಗೆ ಸಮರ್ಪಕ ತನಿಖೆ ನಡೆಸಿಲ್ಲ. ರೇಡಿಯೋ ಸ್ಟೇಶನ್ ಬಳಿಯ ಸ್ಮಶಾನದ ಬಳಿ ಅಕ್ರಮವಾಗಿ ತರಕಾರಿ ಮಾರುಕಟ್ಟೆ ನಡೆಸಿ ನಗರಸಭೆಯ ಆದಾಯಕ್ಕೆ ಕೊಕ್ಕೆ ಇಡುತ್ತಿದ್ದಾರೆ. ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಸಚಿವ ಎನ್ ಎಸ್ ಬೊಸರಾಜು ಅವರ ಕೃಪಕಟಾಕ್ಷದಿಂದ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಬಳ್ಳಾರಿ | ಎರಡು ವರ್ಷದ ಮಗುವಿಗೆ ಲಿವರ್ ಸಮಸ್ಯೆ: ದಾನಿಗಳ ನೆರವಿಗಾಗಿ ಕಾಯುತ್ತಿರುವ ಪೋಷಕರು
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಭು ನಾಯಕ, ರಿಜ್ವಾನ್, ಬಸವರಾಜ, ಕೆ.ವಿ ಖಾಜಪ್ಪ ಉಪಸ್ಥಿತರಿದ್ದರು.
