ತುಂಗಭದ್ರಾ ಎಡದಂಡೆ ಕಾಲುವೆಯ 104 ಮೈಲ್ ಕೆಳಭಾಗದ ರೈತರಿಗೆ ನೀರು ಒದಗಿಸುವುದು, ಅಕ್ರಮವಾಗಿ ನೀರು ಕಳ್ಳತನ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿ ರೈತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ರೈತರು ರಾಯಚೂರಿನ ಸಾತ್ ಮೈಲ್ ಹತ್ತಿರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕುರ್ಡಿ ಮಾರ್ಗದಿಂದ ಸಂಚರಿಸಿದ ವಾಹನಗಳನ್ನು ದಿನ್ನಿಯಲ್ಲಿ ತಡೆದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವಂತಾಯಿತು.
“ಕಾಲುವೆ ನೀರು ಹರಿಸಿದಾಗಿನಿಂದ ನಿಗದಿತ ಗೇಜ್‌ನಲ್ಲಿ ನೀರು ಪೂರೈಕೆಯಾಗಿದೆ. ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ನೀರು ಹರಿಸುವಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ತೊರಿದ್ದಾರೆ” ಎಂದು ರೈತರು ಆರೋಪಿಸಿದರು.
“ತುಂಗಭದ್ರಾ ಎಡದಂಡೆ ಕಾಲುವೆಯಿಂದ ಹರಿಸಿದ ನೀರನ್ನು ಅಕ್ರಮವಾಗಿ ಬಳಕೆ ಮಾಡುತ್ತಿರುವುದು ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳಿಗೆ ಮಾಹಿತಿ ಇದ್ದರೂ ಕೂಡ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
2010ಕ್ಕಿಂತ ಮೊದಲು ಎಡದಂಡೆ ಕಾಲುವೆಗೆ 3300ರಿಂದ 3400 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿದ್ದ ವೇಳೆ ಮೈಲ್ ಸಂಖ್ಯೆ 104ಕ್ಕೆ 6 ಅಡಿ ನೀರು ಬರುತ್ತಿತ್ತು. ಆದರೆ, ಈಗ 4100 ಕ್ಯೂಸೆಕ್ ನೀರು ಬಿಟ್ಟರೂ ಮಾನ್ವಿ, ಸಿರವಾರ ಮತ್ತು ರಾಯಚೂರು ತಾಲೂಕಿಗೆ ನೀರು ತಲುಪುತ್ತಿಲ್ಲ. ಕಾರಣ, ಮೇಲ್ಭಾಗದ ಕೆಲವು ರೈತರು ಅನಧಿಕೃತವಾಗಿ ನೀರಾವರಿ ಮಾಡಿಕೊಳ್ಳುತ್ತಿದ್ದಾರೆ” ಎಂದು ದೂರಿದರು.
2008ರಿಂದ 2012ರವರೆಗೆ ಕಾಲುವೆ ದುರಸ್ಥಿ ಮತ್ತು ಆಧುನೀಕರಣಕ್ಕೆ ಸರ್ಕಾರ ಸುಮಾರು 10 ಸಾವಿರ ಕೋಟಿ ಹಣ ಖರ್ಚು ಮಾಡಿದೆ. ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಸೆಪ್ಟಂಬರ್ 25ರಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾ ಗಿದೆ. ಅದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಕಿಡಿಕಾರಿದರು.
“ಅಕ್ರಮವಾಗಿ ನೀರು ಬಳಕೆಗೆ ಸಂಬಂಧಿಸಿದಂತೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಇವರು ತಮ್ಮ ಭಾಗದಲ್ಲಿ ಕಾಲುವೆಯ ನೀರನ್ನು ಅಕ್ರಮವಾಗಿ ಬಳಸಲು ಅನುಕೂಲ ಮಾಡಿಕೊಟ್ಟಿದ್ದು, ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಎಲ್ಲ ರೈತರಿಂದ ಒಂದು ಬೆಳೆಗೆ 2000 ಚೀಲ ಭತ್ತವನ್ನು ಹಫ್ತಾ ಸಂಗ್ರಹಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ವೋಟ್ ಬ್ಯಾಂಕ್‌ಗಾಗಿ ತಮ್ಮ ಭಾಗದ ರೈತರಿಗೆ ಸಹಾಯ ಮಾಡುವ ನೆಪದಲ್ಲಿ ಭತ್ತದ ಹಫ್ತಾ ವಸೂಲಿ ಮಾಡಿ, ಹಣ ಗಳಿಸುವ ಉದ್ದೇಶದಿಂದ ಜನಪ್ರತಿನಿಗಳೇ ಅಕ್ರಮ ನೀರು ಬಳಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೀಗಾದರೆ, ಕಾಲುವೆಯ ಕೆಳಭಾಗದ ರೈತರ ಗತಿ ಏನು” ಎಂದು ಪ್ರಶ್ನೆ ಮಾಡಿದರು.
“ಅಕ್ರಮ ನೀರು ಬಳಕೆ ಕುರಿತು ಕೂಡಲೇ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕು. ಕಾಲುವೆಯ ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕೆಳಭಾಗದ ಮಾನ್ವಿ, ಸಿರವಾರ ಮತ್ತು ರಾಯಚೂರು ತಾಲೂಕುಗಳ ಎಲ್ಲ ರೈತರಿಗೂ ನಿಗದಿತ ಪ್ರಮಾಣದಲ್ಲಿ ಗೇಜ್ ನಿರ್ವಹಣೆ ಮಾಡಬೇಕು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೇಕೆದಾಟು ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸಿ: ಮೋಹನ್ ದಾಸರಿ
ಪ್ರತಿಭಟನೆಯ ನೇತೃತ್ವವನ್ನು 104 ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಉಪಾಧ್ಯಕ್ಷ ಕೆ.ಶರಣಪ್ಪ ಕಲ್ಮಲಾ, ಸಿದ್ದನಗೌಡ ನೆಲಹಾಳ, ಶಾಸಕ ಡಾ.ಶಿವರಾಜ ಪಾಟಿಲ್, ಕರ್ನಾಟಕ ರೈತ ಸಂಘದ ಆಧ್ಯಕ್ಷ ಪ್ರಭಾಕರ ಪಾಟಿಲ್ ಇಂಗಳಧಾಳ, ಅನಿತಾ ಬಸವರಾಜ, ಬಸವರಾಜ ಕಲ್ಲೂರು, ಬಿ ರಾಮು ಸೇರಿದಂತೆ ಹಲವು ಗ್ರಾಮಗಳ ಮುಖಂಡರುಗಳು, ಹಲವು ರೈತ ಸಂಘಟನೆ ಪದಾಧಿಕಾರಿಗಳು ಒಳಗೊಂಡಂತೆ ನೂರಾರು ಜನರು ಇದ್ದರು.
ವರದಿ : ಹಫೀಜುಲ್ಲ