ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಹೋಗಲಾಡಿಸುವುದು, ದೇವದಾಸಿಯರ ಮರು ಸಮೀಕ್ಷೆ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜನವರಿ 25ರಂದು ರಾಯಚೂರು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕಿ ಮೋಕ್ಷಮ್ಮ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಶಿಕ್ಷಕರ ನೇಮಕ ಮಾಡಲು ನಿರಂತರವಾಗಿ ಹೋರಾಟ ಮಾಡಿದ್ದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಲ್ಲಾ ವಿಷಯವಾರು ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ದೂರಿದರು.
“ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಕಡೆ ಶೇ.75ರಷ್ಟು ಅತಿಥಿ ಶಿಕ್ಷಕರಿದ್ದು, ಉಳಿದಂತೆ ಶೇ 25ರಷ್ಟು ಮಾತ್ರ ಕಾಯಂ ಶಿಕ್ಷಕರಿದ್ದಾರೆ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ದೊರೆಯಲು ಎಲ್ಲಿಂದ ಸಾಧ್ಯ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಸೌಲಭ್ಯ ಒದಗಿಸಿಕೊಡುವಲ್ಲಿ ಸರ್ಕಾ ಎಡವಿದೆ” ಎಂದರು.
“ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಹೆಚ್ಚಿದೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಅನುದಾನ ನೀಡುತ್ತಿದ್ದರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಸಾಕ್ಷರತೆ ಮಾದರಿ ಅಭಿಯಾನವನ್ನು ನಡೆಸಲು ಸರ್ಕಾರ ಮುಂದಾಗಬೇಕಿದೆ” ಎಂದರು.
ವಿದ್ಯಾ ಪಾಟೀಲ್ ಮಾತನಾಡಿ, “ದೇವದಾಸಿ ಮಹಿಳೆಯರಿಗೆ ಪಿಂಚಣಿ ಸೌಲಭ್ಯವಿಲ್ಲದೆ, ಅವರ ಮಕ್ಕಳ ಶಿಕ್ಷಣ, ಮದುವೆ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಕ್ಕೆ ಅನುದಾನ ಮೀಸಲಿಟ್ಟಿದೆ. ಆದರೆ ಬಳಕೆಯಾಗುತ್ತಿಲ್ಲ” ಎಂದು ಆರೋಪಿಸಿದರು.
“ದೇವದಾಸಿ ಮಹಿಳೆಯರ ಕುರಿತು ಮರು ಸರ್ವೆ ನಡೆಸಿ ಬಿಟ್ಟುಹೋದ ದೇವದಾಸಿಯರ ಹೆಸರು ಸೇರ್ಪಡೆ ಮಾಡಬೇಕು. ಪಿಂಚಣಿ, ಸೇರಿದಂತೆ ಸೌಲಭ್ಯ ಒದಗಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ ರಿಪೇರಿಯಿಂದಾಗಿ ಇಂದು ಬಂದ್ ಆಗಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹೋರಾಟ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ದುರಸ್ತಿ ಮಾಡಿಸುವಲ್ಲಿ ನಿರ್ಲಕ್ಷ್ಯ ತಾಳಿದೆ” ಎಂದು ಆಪಾದಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜ. 30ರಂದು ದೇಶಕ್ಕಾಗಿ ಮಡಿದ ಹುತಾತ್ಮರ ನೆನಪಿನ ದಿನಾಚರಣೆ
“ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಶಿಶುಗಳು ಸಾವನ್ನಪ್ಪುತ್ತಿರುವುದು ಖಂಡನೀಯ. ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಪಾರದರ್ಶಕ ಗುಣಮಟ್ಟದ ಔಷಧಿಗಳನ್ನು ಖರೀದಿಸುವ ನೀತಿ ಜಾರಿಗೊಳಿಸಬೇಕು. ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಕೇವಲ ಭರವಸೆ ನೀಡಿ ನುಣಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜನವರಿ 25ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, 20,000ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾರೆಮ್ಮ, ರಾಧ, ಹುಚ್ಚಮ್ಮ, ವಿರೂಪಮ್ಮ ಸೇರಿದಂತೆ ಇತರರು ಇದ್ದರು.
