ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಿಡಿಬ್ಲ್ಯೂಡಿ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ ನಿರ್ವಹಣೆಯಿಲ್ಲದೆ ಕೆಟ್ಟುನಿಂತಿದ್ದು, ಮಲಮೂತ್ರ ವಿಸರ್ಜನೆಗೆ ಹಾಗೂ ಕುಡುಕರ ತಾಣವಾಗಿ ಮಾರ್ಪಟ್ಟಿದೆ ಎಂದು ಹೇಳುತ್ತಾರೆ ಸ್ಥಳೀಯರು.
ಒಂದು ಹೊತ್ತಿನ ಊಟಕ್ಕೆ ಪರದಾಡುವ ಬಡವರನ್ನು ದೃಷ್ಟಿಯಲ್ಲಿರಿಸಿಕೊಂಡು ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಜಾರಿಗೆ ತಂದ ಐತಿಹಾಸಿಕ ಯೋಜನೆಯಾಗಿದೆ. ಆದರೆ ಕೆಲವು ಕಡೆ ಅರ್ಧ ಕಾಮಗಾರಿಗೆ ಕುಂಠಿತಗೊಂಡಿವೆ.
ಕ್ಯಾಂಟಿನ್ ಕಟ್ಟಡ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಆದರೆ, ಇತರೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಇಂದಿರಾ ಕ್ಯಾಂಟಿನ್ ಯಾವಾಗ ತಮ್ಮ ಹೊಟ್ಟೆ ತುಂಬಿಸುತ್ತದೆಂಬ ಕಾತುರತೆಯಲ್ಲಿದ್ದಾರೆ ಇಲ್ಲಿನ ಜನಸಾಮಾನ್ಯರು.

ಸ್ಥಳೀಯ ಹೋರಾಟಗಾರ ಮೇಷಕ್ ದೊಡ್ಮನಿ ಮಾತನಾಡಿ, “ಸುಮಾರು ದಿನಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಂದಿರಾ ಕ್ಯಾಂಟಿನ್ ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿದ್ದು, ಈ ಇಂದಿರಾ ಕ್ಯಾಂಟಿನ್ ಕುರಿತು ಯಾರೂ ಕೇಳುವವರು, ಹೇಳುವವರೇ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ತಾಲೂಕಿನ ಕಾಂಗ್ರೆಸ್ ಪಕ್ಷದ ಶಾಸಕ ಹಂಪಯ್ಯ ನಾಯಕ ಅವರು ಇಂದಿರಾ ಕ್ಯಾಂಟಿನ್ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಿರಾಗಿದ್ದರು. ಏಕಾಏಕಿ ಕಾಮಗಾರಿ ಮೊಟಕುಗೊಂಡಿದೆ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಆದಷ್ಟು ಬೇಗ ಪ್ರಾರಂಭಿಸಬೇಕು” ಎಂದರು.
ಕಾಲೇಜು ವಿದ್ಯಾರ್ಥಿ ಬಸವರಾಜ್ ಮಾತನಾಡಿ, “ನಿತ್ಯ ಹಳ್ಳಿಗಳಿಂದ ಬೆಳಿಗ್ಗೆಯೇ ಪಟ್ಟಣಕ್ಕೆ ಬಂದಿರುತ್ತೇವೆ ಸರಿಯಾಗಿ ಬಸ್ ವ್ಯವಸ್ಥೆಯೂ ಇಲ್ಲದ ಕಾರಣ ಖಾಸಗಿ ವಾಹನಗಳ ಮೂಲಕ ಪಟ್ಟಣ ಸೇರಿರುತ್ತೇವೆ. ಹೋಟೆಲ್‌ಗಳಲ್ಲಿ ಊಟ, ತಿಂಡಿ ಮಾಡಲು ಹೋದರೆ ನೂರಾರು ರೂಪಾಯಿ ಖರ್ಚಾಗುತ್ತದೆ. ಹಾಗಾಗಿ ಇಂದಿರಾ ಕ್ಯಾಂಟಿನ್ ಪ್ರಾರಂಭವಾದರೆ ಕಡಿಮೆ ಖರ್ಚಿನಲ್ಲಿ ಉತ್ತಮ ಊಟ ಸಿಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು ಊಟ ಮಾಡುತ್ತಾರೆ” ಎಂದರು.
ಸ್ಥಳೀಯ ಪತ್ರಕರ್ತ ಸುಂದರ ಮಾತನಾಡಿ, “ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣ ಪ್ರಾರಂಭ ಮಾಡುವ ಮಟ್ಟಿಗೆ ವೇಗ ಪಡೆದುಕೊಂಡಿತು. ಆದರೆ, ಕಾಮಗಾರಿ ಸ್ಥಗಿತಗೊಂಡು ಹಲವು ದಿನಗಳು ಕಳೆದರೂ ಕೂಡಾ ಕಾರಣ ಮಾತ್ರ ನಿಗೂಢವಾಗಿದೆ. ಕಟ್ಟಡ ಮಾತ್ರ ಪೂರ್ಣಗೊಂಡಿದೆ. ಅತೀ ಶೀಘ್ರದಲ್ಲಿ ಉದ್ಘಾಟನೆಯಾಗಬೇಕು. ಇಲ್ಲದಿದ್ದರೆ ಅದು ಸಾರ್ವಜನಿಕರ ಮಲ ಮೂತ್ರ ವಿಸರ್ಜನೆಗೆ ತಾಣವಾಗುತ್ತದೆ” ಇದರ ಬಗ್ಗೆ ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗ ಚಾಲ್ತಿ ಮಾಡುವುದಕ್ಕೆ ಪ್ರಯತ್ನಿಸಬೇಕು” ಎಂದರು.

“ಇಂದಿರಾ ಕ್ಯಾಂಟೀನ್ ಜಿಲ್ಲೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು, ನಗರದ ಮುಖ್ಯ ಕೆಲವು ಕಚೇರಿಗಳು, ಖಾಸಗಿ ಕಾಲೇಜುಗಳು ಇರುವುದರಿಂದ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಕ್ಯಾಂಟಿನ್ ಬಹುತೇಕ ಜನರ ಆಹಾರದ ಬಯಕೆಯನ್ನು ತೀರಿಸಲು ಸೂಕ್ತ ಸ್ಥಳ ಇದಾಗಿದೆ. ಇಂದಿರಾ ಕ್ಯಾಂಟಿನ್ ಪ್ರಾರಂಭವಾದರೆ ತುಂಬಾ ಅನುಕೂಲವಾಗುತ್ತದೆ” ಎಂಬುದು ಸ್ಥಳೀಯರ ಆಶಯವಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್