ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹತ್ತಲು ಕೃತಕ ರ್ಯಾಂಪ್ ಅಳವಡಿಸದೇ ವೇದಿಕೆಯ ಕೆಳಭಾಗದಲ್ಲಿ ಸನ್ಮಾನ ಮಾಡುವ ಮೂಲಕ ವಿಶೇಷಚೇತನರಿಗೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಕೂಡಲೇ ವಿಶೇಷಚೇತನರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ವಿಶೇಷಚೇತನರ ರಾಜ್ಯ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶಿವಗ್ಯಾನಿ ಅತ್ತನೂರು ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ವಿಶ್ವ ವಿಶೇಷಚೇತನರ ದಿನಾಚರಣೆಯ ಅಂಗವಾಗಿ ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ವಿಶೇಷಚೇತನರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ವೇದಿಕೆ ಹತ್ತಲು ಆಗದವರಿಗೆ ರ್ಯಾಂಪ್, ಬ್ರೈಲ್ ಲಿಪಿ ಸೇರಿದಂತೆ ವಿವಿಧ ಸಲಕರಣೆ ಇಡಬೇಕೆಂದು ಮನವಿ ಮಾಡಲಾಗಿತ್ತು. ಆದರೂ ಕೃತಕ ರ್ಯಾಂಪ್ ಅಳವಡಿಸದೆ ಸಾಧಕರನ್ನು ವೇದಿಕೆಯ ಕೆಳಭಾಗದಲ್ಲಿ ಕೂರಿಸಿದ್ದರು. ಅಲ್ಲಿಯೇ ಸನ್ಮಾನ ಮಾಡಿದ್ದು, ವಿಶೇಷಚೇತನರ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ವಿಶೇಷಚೇತನರಿಗೆ ಆದ ಅವಮಾನವನ್ನು ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿಗೆ ಹೇಳಲು ಮುಂದಾದ ವೇಳೆ ಮತ್ತೊಂದು ದ್ವಾರದಿಂದ ಹೊರ ಹೋಗಿದ್ದರು. ವಿಶೇಷಚೇತನರ ಕಲ್ಯಾಣ ಅಧಿಕಾರಿ ಶ್ರೀದೇವಿಗೆ ಹೇಳಿದರೂ ಉಡಾಫೆಯ ಉತ್ತರ ನೀಡಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಸವಣ್ಣನವರ ಕುರಿತು ಅವಹೇಳನ : ಶಾಸಕ ಯತ್ನಾಳ್ ಕ್ಷಮೆಗೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ
“ಕಾರ್ಯಕ್ರಮ ಆಯೋಜಿಸಿದ್ದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಂಡು ಜಿಲ್ಲಾಧಿಕಾರಿ ಕ್ಷಮೆಯಾಚಿಸಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡ ಶಿವಶಂಕರ್ ಬಾಳೆ ಉಪಸ್ಥಿತರಿದ್ದರು.
