ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜಾಗೀರಪನ್ನೂರು ಗ್ರಾಮಕ್ಕೆ ರಸ್ತೆ ನಿರ್ಮಾಣ ಸೇರಿದಂತೆ ಗ್ರಾಮದ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಭೀಮಸೇನೆ ಕರ್ನಾಟಕ ವಿದ್ಯಾರ್ಥಿ ಘಟಕ ವತಿಯಿಂದ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
“ಜಾಗೀರಪನ್ನೂರು ಗ್ರಾಮದಿಂದ ಚಿಕ್ಕಲಪರ್ವಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಶಾಲಾ ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ. ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ತೆರಳಲು ಆಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವಲ್ಲಿ ಸಾವುಗಳು ಸಂಭವಿಸಿರುವ ಉದಾಹರಣಗಳೂ ಇವೆ. ಹಾಗಾಗಿ ಶೀಘ್ರ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಮಳೆಗಾಲದಲ್ಲಿ ತಗ್ಗು ಗುಂಡಿಯಲ್ಲಿ ಮಳೆ ನಿಂತು ತಗ್ಗುಗಳು ಕಾಣದೆ ಅಪಘಾತಗಳು ಸಂಭವಿಸಿ ಕೈ ಕಾಲು ಮುರಿದುಕೊಂಡವರು ತಿಂಗಳುಗಟ್ಟಲೇ ಆಸ್ಪತ್ರೆ ಸೇರುವ ಪರಿಸ್ಥಿತಿ ಇದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅನ್ಯಜಾತಿ ಯುವಕನೊಂದಿಗೆ ಪ್ರೀತಿ; ಮಗಳ ಹತ್ಯೆ ಮಾಡಿ ನದಿಗೆ ಎಸೆದ ತಂದೆ
ಗ್ರಾಮದಲ್ಲಿ ಮೈದಾನ ಹಾಗೂ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಾಣ ಮಾಡಬೇಕು. ಪಾಳು ಬಿದ್ದ ಬಸ್ ನಿಲ್ದಾಣ ಮರು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.
ಹಿಂದೆ ಚುನಾವಣಾ ಸಂದರ್ಭದಲ್ಲಿ ಶಾಸಕರು ಗ್ರಾಮಕ್ಕೆ ಭೇಟಿ ನೀಡಿದಾಗ ಮೈದಾನ ಬಗ್ಗೆ ಪ್ರಸ್ತಾಪಪಡಿಸಿದಾಗ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದ್ದರು ಆದರೆ ಬೇಡಿಕೆ ಹಾಗೆಯೇ ಉಳಿದಿದೆ ತಕ್ಷಣ ಜಾರಿ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಭೀಮಸೇನೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ,ಗ್ರಾಮದ ಮುಖಂಡರು ಇನ್ನಿತರರು ಹಾಜರಿದ್ದರು.
