ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮಕ್ಕೆ ದಾಳಿ ನಡೆಸಿರುವ ಚಿರತೆಗಳು, ಎರಡು ಮೇಕೆಗಳನ್ನು ತಿಂದು ಹಾಕಿರುವ ಘಟನೆ ನಡೆದಿದೆಎ. ಈ ಬೆಳವಣಿಗೆಯಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು, ಗ್ರಾಮದಲ್ಲಿ ರಾತ್ರಿ ವೇಳೆ ಓಡಾಡಲು ಭಯಪಡುತ್ತಿದ್ದಾರೆ.
ಗ್ರಾಮದ ಬಂಡಿ ಮಹಮ್ಮದ್ ಎಂಬುವರಿಗೆ ಸೇರಿ ಎರಡು ಮೇಕೆಗಳನ್ನು ದಾಳಿ ನಡೆಸಿದ ವೇಳೆ ಚಿರತೆ ತಿಂದು ಹಾಕಿದೆ.
ದೊಡ್ಡಿಯಲ್ಲಿ ಮೇಕೆಗಳಿದ್ದು ಎರಡು ಚಿರತೆಗಳು ದೊಡ್ಡಿ ಮೇಲೆ ದಾಳಿ ನಡೆಸಿ ಮೇಕೆ ತಿಂದು ಹಾಕಿವೆ. ಮೇಕೆಗಳ ಚೀರಾಟದಿಂದ ಮಾಲೀಕರು ಸ್ಥಳಕ್ಕೆ ತೆರಳಿದಾಗ ಎರಡು ಚಿರತೆಗಳು ಓಡಿಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಚಿರತೆಗಳನ್ನು ಬಲೆಗೆ ಬೀಳಿಸಲು ಬೋನು ಅಳವಡಿಸಿದ್ದಾರೆ. ಚಿರತೆಯ ಹೆಜ್ಜೆ ಗುರುತು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕೂಡಲೇ ಚಿರತೆಯನ್ನು ಪತ್ತೆ ಮಾಡಿ ರಕ್ಷಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಇತ್ತೀಚಿಗೆ ಚಿರತೆ ಪತ್ತೆಯಾಗಿತ್ತು, ಗ್ರಾಮಸ್ಥರು ಆತಂಕದಿಂದ ಕೊಂದು ಹಾಕಿದ್ದರು. ಈಗ ಕಲ್ಲೂರು ಗ್ರಾಮದಲ್ಲಿ ಎರಡು ಚಿರತೆಗಳು ಇರುವುದು ಪತ್ತೆಯಾಗಿದೆ. ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ : ಹಫೀಜುಲ್ಲ
