ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ತಾರತಮ್ಯ ಮಾಡದೆ, ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸದೇ ಹೋದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರಗಳೇ ಹೊಣೆಯಾಗಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ ಎಚ್ಚರಿಸಿದರು.
ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ಪ್ರತಿಭಟನೆ ಇಂದು (ಜ.17) 615ನೇ ದಿನಕ್ಕೆ ಕಾಲಿಟ್ಟಿದ್ದು. ಸ್ಥಳಕ್ಕೆ ಆಗಮಿಸಿದ್ದ ಅವರು ಹೋರಾಟಕ್ಕೆ ಬೆಂಬಲ ಘೋಷಿಸಿ ಮಾತನಾಡಿದರು. ರಾಜ್ಯಕ್ಕೆ ವಿದ್ಯುತ್, ಚಿನ್ನ, ಭತ್ತ, ಹತ್ತಿ ನೀಡುವ ಜಿಲ್ಲೆಯ ಜನರ ತ್ಯಾಗವನ್ನು ಸರ್ಕಾರಗಳು ಉಡಾಫೆಯಾಗಿ ಪರಿಗಣಿಸಬಾರದು.
ಜಿಲ್ಲೆಯ ಜನರು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಏಮ್ಸ್‌ನಂತಹ ಸಂಸ್ಥೆಗಳು ಮಂಜೂರಿಯಾದರೆ ಆರೋಗ್ಯ ಸಮಸ್ಯೆಗಳೊಂದಿಗೆ ಇಲ್ಲಿಯ ಜನರಿಗೆ ಉದ್ಯೋಗ ದೊರೆಯಲು ಸಹಕಾರಿಯಾಗುತ್ತದೆ. ರಾಜಕೀಯ ಪಕ್ಷಗಳು ಏಮ್ಸ್ ಮಂಜೂರಾತಿ ವಿಷಯದಲ್ಲಿ ರಾಜಕೀಯ ಮಾಡದೇ ತಾರತಮ್ಯ ಮಾಡದೇ ಕೂಡಲೇ ಮಂಜೂರಾತಿಗೆ ಮುಂದಾಗಬೇಕು. ಇಲ್ಲದೇ ಹೋದರೆ ಹೋರಾಟ ರಾಜ್ಯದಾದ್ಯಂತ ವಿಸ್ತರಿಸುವ ಜೊತೆಗೆ, ಏನೆ ಅನಾಹುತ ಸಂಭವಿಸಿದರೂ ಸರ್ಕಾರಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಡಾ.ಬಸವರಾಜ ಕಳಸ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಜೈನ್, ಜಾನ ವೆಸ್ಲಿ, ಡಾ. ಎಸ್.ಎಸ್.ಪಾಟೀಲ್, ರಮೇಶ ಕಲ್ಲೂರು, ಆರಿಫ್‌ಮಿಯಾ, ದೇವೆಂದ್ರಪ್ಪ, ವೆಂಕಯ್ಯ ಶೆಟ್ಟಿ,ಮಲ್ಲನಗೌಡ ಸೇರಿದಂತೆ ರಕ್ಷಣಾ ವೇದಿಕೆ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.