ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಒಡೆತನದ ಆರ್‌ಬಿ ಶುಗರ್ಸ್ ಕಂಪನಿ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆ ಆರೋಪ ಕೇಳಿಬಂದಿದೆ. ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘ ಆಗ್ರಹಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ತಿಮ್ಮಾಪುರ ಅವರ ಆರ್‌ಬಿ ಶುಗರ್ಸ್ ಕಂಪನಿ ಮುಂದಾಗಿದೆ. ಗ್ರಾಮದ ಸರ್ವೆ ನಂ.62ರಲ್ಲಿರುವ ಗೈರಾಣಿ ಜಮೀನನ್ನು ಕಂಪನಿ ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದೆ ಎಂದು ರೈತ ಸಂಘ ಆರೋಪಿಸಿದೆ. ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲಿಂಗಸುಗೂರು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಪ್ರಭಾವಿ ವ್ಯಕ್ತಿಗಳು ಒಂದಷ್ಟು ಜಮೀನು ಖರೀದಿ ಮಾಡಿದ್ದು, ಆ ಜಮೀನಿನ ಪಕ್ಕದಲ್ಲೇ ಇರುವ ಗೈರಾಣಿ ಭೂಮಿಯನ್ನೂ ಆಕ್ರಮಿಸಿಕೊಂಡಿದ್ದಾರೆ. ಆ ಗೈರಾಣಿ ಭೂಮಿ ಜಾನುವಾರುಗಳ ಮೇವಿಗಾಗಿ ಮೀಸಲಾಗಿದೆ. ಆ ಭೂಮಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸುತ್ತಾರೆಂಬ ಮಾತುಗಳು ಕೇಳಿಬರುತ್ತಿವೆ. ಕೂಡಲೇ ಕ್ರಮ ಕೈಗೊಂಡು, ಭೂಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಗ್ರಾಮದ ಬಳಿ ಸಕ್ಕರೆ ಕಾರ್ಖಾನೆ ನಿರ್ಮಾಣವಾದರೆ, ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಪರಿಸರ ಮಾಲಿನ್ಯವಾಗುತ್ತದೆ. ಕಾರ್ಖಾನೆಯ ಕಲುಷಿತ ತ್ಯಾಜ್ಯವನ್ನು ಹತ್ತಿರದಲ್ಲೇ ಹರಿಯುವ ಕೃಷ್ಣ ನದಿಗೆ ಹರಿಬಿಡುವ ಸಾಧ್ಯತೆ ಇದೆ. ಪರಿಣಾಮ, ರೈತರ ಬೆಳೆಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗಲಿದೆ. ಹೀಗಾಗಿ, ಗ್ರಾಮದ ಬಳಿ ಕಾರ್ಖಾನೆ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.