ನ್ಯಾಯಾಲಯದ ಕಲಾಪಗಳಿಗೆ, ನ್ಯಾಯವಾದಿಗಳಿಗೆ ಗೌರವ ಕೊಡದೆ ಭ್ರಷ್ಟಾಚಾರ ನಡೆಸುತ್ತಿರುವ ಸಹಾಯಕ ಆಯುಕ್ತ ರಜನಿಕಾಂತ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯಕರ್ತರು ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ಅವರ ಪ್ರತಿಕೃತ ದಹನ ಮಾಡಿ ಪ್ರತಿಭಟನೆ ನಡೆಸಿದರು.
“ಕಂದಾಯ ಇಲಾಖೆಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಾಗ ವಕೀಲರಿಗೆ ಅಗೌರವ ತೋರುತ್ತಿದ್ದಾರೆ. ಈ ಬಗ್ಗೆ ಜನವರಿ 18ರಂದು ಸಹಾಯಕ ಆಯುಕ್ತ ರಜನಿಕಾಂತ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕನಿಷ್ಟ ನ್ಯಾಯವಾದಿಗಳ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸದೇ ಅಸಹಕಾರ ಧೋರಣೆ ತೋರಿದ್ದಾರೆ” ಎಂದು ಆರೋಪಿಸಿದರು.
“ಸಹಾಯಕ ಆಯುಕ್ತ ರಜಿನಿಕಾಂತ್ ನ್ಯಾಯಾಲಯ ಕಲಾಪ ನಡೆಸದಂತೆ ತಡೆಯಬೇಕು. ಕೂಡಲೇ ಸಹಾಯಕ ಆಯುಕ್ತ ರಜನಿಕಾಂತ್ ವಿರುದ್ಧ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿ ಸೇವೆಯಿಂದ ಅಮಾನತೆಗೊಳಿಸಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸದೇ ಮರಳಿದ ಡಿಸಿ: “ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್ ಬಾನುರಾಜ ಅವರು ಎಸಿ ರಜನಿಕಾಂತ್ ವಿರುದ್ಧ ಕ್ರಮ ಕೈಗೊಳ್ಳದೇ ಭ್ರಷ್ಟಚಾರ ರಕ್ಷಿಸಲಾಗುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳಿಗೆ ಪರದಾಟ
ಅಧಿಕಾರಿಗಳ ವಿರುದ್ಧ ಅಸಂವಿಧಾನಿಕ ಪದ ಬಳಸಿದ್ದರಿಂದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮನವಿ ಸ್ವೀಕರಿಸದೆ ಮರಳಿದ ಘಟನೆ ಜರುಗಿತು. ಪೊಲೀಸರು ಮನವಿಯಲ್ಲಿರುವ ಅಂಶ ಬಿಟ್ಟು ಬೇರೆ ಬೇರೆ ಅಸಂವಿಧಾನಿಕ ಪದ ಬಳಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ಅವರ ಪ್ರತಿಕೃತಿ ದಹಿಸಿ ನ್ಯಾಯವಾದಿಗಳು ಘೋಷಣೆಗಳು ಹಾಕಿ ಮರಳಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎನ್.ಭಾನುರಾಜ, ಪ್ರಧಾನ ಕಾರ್ಯದರ್ಶಿ ಉದಯಕುಮಾರ, ಉಪಾಧ್ಯಕ್ಷ ಬಿ.ಎನ್.ನಾಯಕ, ತಾಯಪ್ಪ, ಜಿತೇಂದ್ರ, ಜಿ.ಟಿ.ರೆಡ್ಡಿ, ಜಗದೀಶ, ಕರುಣಾಕರ ಕಟ್ಟಿಮನಿ, ದೊಡ್ಡಪ್ಪ ಇದ್ದರು.