ಕುಷ್ಠರೋಗವನ್ನು ಬರುವದಕ್ಕಿಂತ ಮುಂಚೆಯೇ ಪತ್ತೆ ಹಚ್ಚಿ ಅದನ್ನು ಗುಣಪಡಿಸ ಬೇಕು ಇದಕ್ಕೆ ಎಲ್ಲ ಇಲಾಖೆಯವರು ಆರೋಗ್ಯ ಇಲಾಖೆಯವರಿಗೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಸುರೇಶ್ ವರ್ಮಾ ಹೇಳಿದರು.
ರಾಯಚೂರು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.
ಈ ಅಭಿಯಾನ ಶಾಲೆಗಳಲ್ಲಿ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಯುವದರಿಂದ ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಲಕ್ಷತೆ ವಹಿಸಬಾರದು ಎಂದು ತಿಳಿಸಿದರು.
ತಾ.ಪಂ ಇಒ ಚಂದ್ರಶೇಖರ ಮಾತನಾಡಿ, ಕುಷ್ಠರೋಗದ ಕುರಿತು ಶಾಲೆಯಲ್ಲಿ ಮಕ್ಕಳಿಗೆ ಪ್ರಬಂಧ ಅಥವಾ ಪ್ರಶೋತ್ತರ ಚಟುವಟಿಕೆಗಳನ್ನು ಏರ್ಪಡಿಸಿ ಅದರಲ್ಲಿ ಎಲ್ಲ ಮಕ್ಕಳು ಭಾಗವಹಿಸುವಂತೆ ತಿಳಿಸಿ ಜಾಗೃತಿ ಮೂಡಿಸಬೇಕು ಹಾಗೂ ಜಾಥಾ ಕಾರ್ಯಕ್ರಮ ಏರ್ಪಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸ ಬೇಕು ಎಂದು ಹೇಳಿದರು.
ತಾಲೂಕ ಆರೋಗ್ಯ ಅಧಿಕಾರಿ ಡಾ. ಪ್ರಜ್ವಲ್ ಕುಮಾರ್ ಮಾತನಾಡಿ, ಕುಷ್ಠರೋಗವು ಮೈಕ್ರೋ ಬ್ಯಾಕ್ಟೀರಿಯಾ ಎಂಬ ಸೂಕ್ಷ್ಮಾಣುವಿನಿಂದ ಬರುತ್ತದೆ. ಈ ರೋಗದ ಲಕ್ಷಣಗಳು ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಸ್ಪರ್ಶ ಜ್ಞಾನವಿಲ್ಲದೆ, ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕೂದಲು ನವೆ ತುರಿಕೆ ಇಲ್ಲದಿರುವದು. ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು, ಸ್ಪರ್ಶ ಜ್ಞಾನ ಇಲ್ಲದಿರುವದು, ಮುಖದಲ್ಲಿ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತೆ ಹೊಳೆಯು ವುದು ಮತ್ತು ಗಂಟಲುಗಳು ಕಾಣಿಸುವುದು. ಎಣ್ಣೆ ಹಚ್ಚಿದಂತೆ ಹೊಳೆಯುವ ಚರ್ಮ ಈ ರೋಗವು ಮುಖ್ಯವಾಗಿ ಚರ್ಮ ಹಾಗೂ ನರಗಳಿಗೆ ಸಂಬಂಧಿಸಿರುತ್ತದೆ.
ಈ ರೋಗ ಬೇಧ ಭಾವವಿಲ್ಲದೇ ಯಾರಿಗಾದರೂ ಬರಬಹುದು. ರೋಗವನ್ನು ಪ್ರಾರಂಭದ ಲಕ್ಷಣಗಳಿದ್ದಾಗ ಕಂಡು ಹಿಡಿದು ಚಿಕಿತ್ಸೆಗೊಳಪಡಿಸಿದರೆ ಅಂಗವಿಕಲತೆ ಆಗುವುದಿಲ್ಲ. ಗುಣಮುಖ ಹೊಂದಿದ ಅಂಗವಿಕಲ ಕುಷ್ಠರೋಗಿಗಳನ್ನು ಆರ್.ಸಿ.ಎಸ್. ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಐಕ್ಯೂರ್ ಹಿರಿಯ ಆರೋಗ್ಯಾಧಿಕಾರಿ ರಂಗಾರಾವ್ ಕುಲಕರ್ಣಿ ಸಂವಿಧಾನ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ನಗರ ಸಭೆ. ಆರ್.ಬಿ.ಎಸ್.ಕೆ, ಸರೋಜ, ವೈದ್ಯರು ಜಿಲ್ಲಾ ಕುಷ್ಠರೋಗ ಅಧಿಕಾರಿಗಳು ಸಿಬ್ಬಂದಿ ಇದ್ದರು.