ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣ ಚಿನ್ನದ ಗಣಿನಾಡು ಎಂದೇ ಪ್ರಸಿದ್ಧವಾಗಿರುವ ನಾಡಿನಲ್ಲಿ ಪದವಿ ಕಾಲೇಜು ಹಾಗೂ ಮೈನಿಂಗ್ ಕಾಲೇಜು ಇಲ್ಲದಿರುವ ಕಾರಣ ಸಾವಿರಾರು ಬಡ ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣದಿಂದ ದೂರು ಉಳಿಯುವ ಸಾಧ್ಯತೆ ಹೆಚ್ಚಾಗಿದೆ.
ಹಟ್ಟಿ ಚಿನ್ನದ ಗಣಿ ಇಡೀ ದೇಶಕ್ಕೆ ಚಿನ್ನ ತೆಗೆಯುವ ನಾಡೆಂದೇ ಪ್ರಸಿದ್ಧವಾಗಿದೆ. ಹಟ್ಟಿ ಚಿನ್ನದ ಗಣಿಯಲ್ಲಿ ಈಗಲೂ ಚಿನ್ನ ಉತ್ಪಾದನೆ ಮಾಡಲಾಗುತ್ತದೆ. ಸರ್ಕಾರದ ಖಜಾನೆ ತುಂಬಿಸುವುದರಲ್ಲಿ ಹಟ್ಟಿ ಚಿನ್ನದ ಗಣಿ ತನ್ನದೇ ಆದ ಖ್ಯಾತಿ ಪಡೆದಿದೆ. ಆದರೆ ಚಿನ್ನದ ನಾಡಿನಲ್ಲಿ ಪದವಿ ಕಾಲೇಜು ಹಾಗೂ ಮೈನಿಂಗ್ ಕಾಲೇಜು ಇಲ್ಲವೆಂದು ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ವಲಸೆ ಹೋಗುತ್ತಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗ ಒಂದೇ ಇದ್ದುದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳು ಪದವಿ ಅಭ್ಯಾಸ ಮಾಡಬೇಕೆಂದರೆ 22 ಕಿಮೀ ದೂರದ ಲಿಂಗಸುಗೂರು ಅಥವಾ 90ಕಿಮೀ ದೂರದ ರಾಯಚೂರಿಗೆ ಹೋಗುವ ಅನಿರ್ವಾಯತೆ ಇದೆ. ಬಡ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಕೆಲ ವಿದ್ಯಾರ್ಥಿನಿಯರು ಪಟ್ಟಣದಲ್ಲಿಯೇ ಪಿಯುಸಿ ಮುಗಿಸುತ್ತಾರೆ. ಆದರೆ ಪದವಿ ಪಡೆಯಲು ಬೇರೆ ಬೇರೆ ಊರುಗಳಿಗೆ ತೆರಳಬೇಕಿದೆ. ಹೀಗಾಗಿ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.
ಸ್ಥಳೀಯ ನಿವಾಸಿ ಹೋರಾಟಗಾರ ಲಾಲ್ ಪೀರ್ ಮಾತನಾಡಿ, “ಪಟ್ಟಣದಲ್ಲಿ 30 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದೆ. ಇಡೀ ತಾಲೂಕಿನಲ್ಲಿ ಹೆಚ್ಚು ಭೂತವುಳ್ಳ ಪಟ್ಟಣವೆಂದರೆ ಹಟ್ಟಿ ಪಟ್ಟಣವಾಗಿದೆ. ಸ್ಥಳೀಯ ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿಗಳಿಗೆ ಇಲ್ಲಿ ಪದವಿ ಕಾಲೇಜುಗಳಿಲ್ಲವೆಂದು ಗೊತ್ತಿದ್ದರೂ ಕಾಲೇಜು ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ” ಎಂದರು.
“ರಾಜಕೀಯ ವ್ಯಕ್ತಿಗಳು ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿ ಲೂಟಿ ಹೊಡೆಯುವುದಕ್ಕೆ ಮುಂದಾಗುತ್ತಾರೆ. ಆದರೆ ಮಕ್ಕಳ ಭವಿಷ್ಯಕ್ಕಾಗಿ ಕಾಲೇಜು ನಿರ್ಮಾಣಕ್ಕೆ ಮುಂದಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ರಾಯಚೂರು ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಮಾತನಾಡಿ, “ಚಿನ್ನ ತೆಗೆಯುವ ನಾಡು ಇಡೀ ದೇಶಕ್ಕೆ ಹೆಸರಾಗಿರುವ ಪಟ್ಟಣದಲ್ಲಿ ಡಿಗ್ರಿ ಹಾಗೂ ಮೈನಿಂಗ್ ಕಾಲೇಜು ಇಲ್ಲವೆಂದು ಹೇಳೋಕೂ ತುಂಬಾ ಬೇಸರವಾಗುತ್ತದೆ” ಎಂದರು.

“ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ರಾಯಚೂರು ಜಿಲ್ಲೆಯು ಹಿಂದುಳಿದ ಜಿಲ್ಲೆಗೆ ಹೆಸರಾಗಿದೆ. ಚಿನ್ನದ ಗಣಿ ಕಂಪನಿಯಲ್ಲಿ 5000 ಕ್ಕಿಂತ ಅಧಿಕ ಮಂದಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಸ್ಥಳೀಯ ಶಾಸಕರಾಗಲಿ, ಅಧಿಕಾರಿಗಳಾಗಲಿ ಕಾಲೇಜಿನ ಬಗ್ಗೆ ಗಮನ ಹರಿಸುತ್ತಿಲ್ಲ” ಎಂದು ಆರೋಪಿಸಿದರು.
“ಶಾಸಕರಿಗೆ ಹಾಗೂ ಇತರ ಮುಖಂಡರನ್ನು ಕೇಳಿದರೆ, ʼಕಾಲೇಜು ಮಂಜೂರು ಮಾಡುವುದಕ್ಕೆ ಜಾಗ ಇಲ್ಲʼವೆಂದು ಉಡಾಫೆ ಉತ್ತರ ನೀಡುತ್ತಾರೆ. ಜಾಗವಿಲ್ಲವೆಂದು ಹೇಳುವುದಕ್ಕೆ ನೀವು ಈ ಕ್ಷೇತ್ರದ ಶಾಸಕರಾಗುವುದಕ್ಕೆ ಅರ್ಹತೆಯೇ ಇಲ್ಲ” ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
ಕಾರ್ಮಿಕ ಮುಖಂಡ ನಿಂಗಪ್ಪ ನಿಲೋಗಲ್ ಮಾತನಾಡಿ, “ಗಣಿ ನಾಡಿನ ಮಕ್ಕಳು ಬೇರೆ ಬೇರೆ ಕಡೆ ಹೋಗಿ ಐಟಿಐ, ಡಿಪ್ಲೊಮಾ ಸೇರಿದಂತೆ ಇತರ ಕೋರ್ಸ್‌ಗಳನ್ನು ಕಲಿಯಬೇಕಾಗಿದೆ. ಆದರೆ ಇಲ್ಲಿ ಸ್ಥಳೀಯವಾಗಿ ಮೈನಿಂಗ್ ಕಾಲೇಜು ಮಂಜೂರಾದರೆ ಸ್ಥಳೀಯ ಮಕ್ಕಳು ಭವಿಷ್ಯವನ್ನು ರೂಪಿಸಕೊಳ್ಳುತ್ತಾರೆ. ಬಡ ಮಕ್ಕಳಿಗೆ ಅನುಕೂಲವಾಗುತ್ತದೆ” ಎಂದರು.
ಪದವಿ ವಿದ್ಯಾರ್ಥಿನಿ ಮಾತನಾಡಿ, “ಪಿಯುಸಿ ಮುಗಿದ ನಂತರ ಪಟ್ಟಣದಿಂದ ತಾಲ್ಲೂಕಿಗೆ ತೆರಳಬೇಕಾಗಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ತಾಲೂಕಿಗೆ ತೆರಳುತ್ತಾರೆ. ಚಿನ್ನದ ನಾಡಿನಲ್ಲಿ ಖಾಸಗಿ ಪದವಿ ಕಾಲೇಜುಗಳು ಇವೆ. ಸರ್ಕಾರಿ ಪದವಿ ಕಾಲೇಜು ನಿರ್ಮಾಣ ಮಾಡುವುದರಿಂದ ಇಲ್ಲಿನ ಸುತ್ತಮುತ್ತಲ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ” ಎಂದು ಹೇಳಿದರು.
