ರಾಜ್ಯ ಸರ್ಕಾರದ ಎಲ್ಲ ನೌಕರರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವುದರ ಜತೆಗೆ ಅದು ಸಾರ್ವಜನಿಕರಿಗೆ ಲಭ್ಯವಿರಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಮುಖಂಡ ನಿರುಪಾದಿ ಕೆ ಗೋಮರ್ಸಿ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, “ಕಾನೂನು ಪ್ರಕಾರ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಇದು ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ಅನ್ವಯವಾಗುವಂತೆ ಕಟ್ಟುನಿಟ್ಟಾಗಿ ನಿಯಮ ರೂಪಿಸಬೇಕು” ಎಂದು ತಿಳಿಸಿದರು.
“ಕೇಂದ್ರ ಸರ್ಕಾರದ ನೌಕರರು ತಮ್ಮ ಆಸ್ತಿ ವಿವರಗಳನ್ನು ಪ್ರತಿ ವರ್ಷ ಲೋಕಪಾಲರಿಗೆ ಕಡ್ಡಾಯವಾಗಿ ಸಲ್ಲಿಸಬೇಕೆಂದು ಲೋಕಪಾಲ ಕಾಯ್ದೆಯ ಸೆಕ್ಷನ್ 44 ಹೇಳುತ್ತದೆ. ಕೇಂದ್ರ ಸರ್ಕಾರದ ನೌಕರರು ಮತ್ತು ಅಧಿಕಾರಿಗಳಿಗೆ ಅನ್ವಯವಾಗುವ ಈ ನಿಯಮ, ತಮಗೆ ಇಂಥ ನಿಯಮ ಇರಬಾರದೆಂದು ರಾಜ್ಯ ಸರ್ಕಾರದ ನೌಕರರು ಹೇಳುವುದು ವಿರೋಧಬಾಸ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದೆಹಲಿ ಗಣರಾಜ್ಯೋತ್ಸವಕ್ಕೆ ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಆಹ್ವಾನ
“ನಿತ್ಯವೂ ಅಧಿಕಾರಿಗಳು ಹಾಗೂ ರಾಜಕೀಯ ಗಣ್ಯ ವ್ಯಕ್ತಿಗಳು ಭ್ರಷ್ಟಾಚಾರದಲ್ಲಿ ಶಾಮೀಲಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಈ ಸೂಚನೆ ಹೊರಡಿಸಿದರೆ ಅಧಿಕಾರ ದುರುಪಯೋಗದಿಂದ ಅಕ್ರಮ ಆಸ್ತಿ ಗಳಿಕೆಗೆ ಕಡಿವಾಣ ಹಾಕುವುದಕ್ಕೆ ಹಾಗೂ ಭ್ರಷ್ಟಾಚಾರ ತಡೆಗೆ ಸಾಧ್ಯವಾಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
