ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಕೇಂದ್ರವಾಗಿ 7 ವರ್ಷ ಕಳೆದರೂ ಉಪ ನೋಂದಣಿ ಕಚೇರಿ ಇಲ್ಲದೆ ಸಾರ್ವಜನಿಕರು ಬೇರೆ ಬೇರೆ ರೀತಿಯ ಪ್ರಮಾಣ ಪತ್ರ ಮಾಡುವುದಕ್ಕೆ ಮೂರು ತಾಲೂಕಿಗೆ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ.
2018ರಲ್ಲಿ ಮಸ್ಕಿ ತಾಲೂಕು ಕೇಂದ್ರವೆಂದು ಘೋಷಣೆಯಾಗಿದೆ. ಮಸ್ಕಿ ನಗರದಲ್ಲಿ ತಹಶೀಲ್ದಾರ್ ಕಚೇರಿ, ನ್ಯಾಯಾಲಯ ಕಚೇರಿಗಳ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ಸುಮಾರು 7 ವರ್ಷ ಕಳೆದರೂ ಮಸ್ಕಿಯಲ್ಲಿ ಉಪ ನೋಂದಣಿ ಕಚೇರಿ ತೆರೆದಿರುವುದಿಲ್ಲವೆಂದು ಜನ ಸಾಮಾನ್ಯರು ಚಿಂತೆಗೀಡಾಗಿದ್ದಾರೆ.
“ಮಸ್ಕಿ ತಾಲೂಕಿನಲ್ಲಿ 143 ಗ್ರಾಮಗಳು ಹಾಗೂ 20 ತಾಂಡಾಗಳು ಹಾಗೂ 6 ಹೋಬಳಿಗಳಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ತಾಲೂಕಿಗೆ ಅಲೆದಾಡುತ್ತಾರೆ. ಆದರೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ತೀರಾ ಹಿಂದುಳಿದ ಪ್ರದೇಶವಾಗಿದೆ. ಆದರೆ ಇಲ್ಲಿ ನೋಂದಣಿ ಕಚೇರಿಯಿಲ್ಲ. ಈ ಭಾಗದ ಜನರು ನೋಂದಣಿ ಕಾರ್ಯಗಳಿಗಾಗಿ ಅಕ್ಕಪಕ್ಕದ ತಾಲೂಕುಗಳಿಗೆ ಅಲೆದಾಡಬೇಕಿದೆ. ಇದರಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ” ಎಂದು ತಾಲೂಕಿನ ನಿವಾಸಿಗಳು ಅತಂತ್ರರಾಗಿದ್ದಾರೆ.

ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕ್ ಮುರಾರಿ ಮಾತನಾಡಿ, “ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಸಿರಾವಾರ ಹಾಗೂ ಮಸ್ಕಿ ನೂತನ ತಾಲೂಕುಗಳಾಗಿ ಘೋಷಣೆ ಮಾಡಲಾಗಿತ್ತು. ಆದರೆ ಸಿರವಾರ ತಾಲೂಕಿನಲ್ಲಿ ಕಳೆದ ವರ್ಷ ಉಪ ನೋಂದಣಿ(ಸಬ್ ರಿಜಿಸ್ಟರ್) ಕಚೇರಿ ಪ್ರಾರಂಭಗೊಂಡಿದೆ. ಆದರೆ ಮಸ್ಕಿ ತಾಲೂಕಿನಲ್ಲಿ ಉಪ ನೋಂದಣಿ ಕಚೇರಿಯಾಗಿಲ್ಲ. ಇಲ್ಲಿನ ಜನರು ಬೇರೆ ಬೇರೆ ತಾಲೂಕಿಗೆ ಅಲೆದಾಡುವ ಪರಿಸ್ಥಿತಿಯಿದೆ. ನಮ್ಮ ತಾಲೂಕಿನ ಎಲ್ಲ ಜನರಿಗೆ ವಿವಾಹ, ಖರೀದಿ, ವಿಭಾಗ, ಮರಣ ಶಾಸನ ಇನ್ನು ಮುಂತಾದ ನೋಂದಣಿ ಕಾರ್ಯಕ್ಕೆ ಹಾಗೂ ತಾಲೂಕಿನ ಅಭಿವೃದ್ಧಿಗೆ ತಡೆಹಿಡಿದಂತಾಗಿದೆ” ಎಂದರು.
“ನೋಂದಣಿ ಕಚೇರಿ ಇಲ್ಲದಿರುವುದರಿಂದ ಮಾರಾಟ ವಹಿವಾಟುಗಳು ಕುಂಠಿತಗೊಂಡಿದ್ದು, ಜನರಿಗೆ ಮೂರು ತಾಲೂಕುಗಳಿಗೆ ಅಲೆದಾಡಿ ಸಾಕಾಗಿದೆ. ತಹಶೀಲ್ದಾರ್ ಕಚೇರಿ ಬಿಟ್ಟರೆ ಉಳಿದ ಕಚೇರಿಗಳಿಗೆ ಈ ಹಿಂದಿನ ತಾಲೂಕುಗಳಲ್ಲಿ ಇರುತ್ತವೆ. ಅಲ್ಲಿಗೆ ಹೋಗಿ ಅಲ್ಲಿಂದ ಇಲ್ಲಿಗೆ ಬರುವುದು ತುಂಬ ಹೈರಾಣದ ಕೆಲಸವಾಗಿರುತ್ತದೆ. ಮಸ್ಕಿ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳು ಸರ್ಕಾರಿ ಕಚೇರಿ ಕೆಲಸ ಕಾರ್ಯಗಳು ಚಟುವಟಿಕೆಗೆ ಹೋಗಬೇಕಾದರೆ ಮೂರು ತಾಲೂಕಿಗೆ ಸುತ್ತಬೇಕು. ಕೆಲವು ಗ್ರಾಮಗಳು ಮಾನ್ವಿ ತಾಲೂಕಿಗೆ ಸೇರ್ಪಡೆ, ಕೆಲವು ಲಿಂಗಸಗೂರು ತಾಲೂಕಿಗೆ ಹಾಗೂ ಇನ್ನೂ ಕೆಲವು ಸಿಂಧನೂರು ತಾಲೂಕಿಗೆ ಜನ ಸಾಮಾನ್ಯರು ತಿರುಗಾಡುತ್ತಿದ್ದಾರೆ” ಎಂದು ಹೇಳಿದರು.
“ಕೆಲವು ದಿನಗಳ ಹಿಂದೆಯು ಇದರ ಬಗ್ಗೆ ಶಾಸಕರಿಗೆ, ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗಿದೆ. ಆದಷ್ಟು ಬೇಗೆನೆ ನಮ್ಮ ತಾಲೂಕಿಗೆ ನೋಂದಣಿ ಕಚೇರಿ ಪ್ರಾರಂಭಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಹೇಳಿದರು.

