ಸರ್ಕಾರಿ ಬಸ್ ಚಾಲಕರು ಪ್ರಯಾಣಿಕರನ್ನು ಸುರಕ್ಷತೆಯಿಂದ ತಮ್ಮ ಗ್ರಾಮಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸುರಕ್ಷತೆಯಿಂದ ಬಸ್‌ಗಳನ್ನು ಚಾಲನೆ ಮಾಡುವ ಸಿಬ್ಬಂದಿಗೆ ಚಾಲಕರ ದಿನದಂದು ರಾಜ್ಯ ಮಟ್ಟದಲ್ಲಿ ಬಂಗಾರ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಂ.ಎಸ್ ಹೇಳಿದರು.
ರಾಯಚೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪ್ರತಿ ವರ್ಷ ಚಾಲಕರ ದಿನ ಆಚರಣೆ ಮಾಡಲಾಗುತ್ತದೆ. ಚಾಲಕರು ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರ ನಿರಂತರ ಸೇವೆಗೆ ಪ್ರಯಾಣಿಕರಿಂದ ಹೂ ನೀಡುವ ಮೂಲಕ ಅಂಭಿನಂದಿಸಲಾಗುತ್ತಿದೆ” ಎಂದು ತಿಳಿಸಿದರು.
“ಸುರಕ್ಷಿತ ಚಾಲನೆಗಾಗಿ ಹಾಗೂ ಪ್ರಯಾಣಿಕರ ಜೊತೆಗೆ ಸೌಹಾರ್ದತೆಯಿಂದ ಮಾತನಾಡುವ ಮೂಲಕ ಅವರನ್ನು ತಮ್ಮ ಸ್ಥಳಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿರುವ ಚಾಲಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 2019ರಲ್ಲಿ ಚಿನ್ನದ ಪದಕವನ್ನು ಜಿಲ್ಲೆಯ ಚಾಲಕ ಗಂಗಣ್ಣ ಅವರಿಗೆ ನೀಡಲಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ತಾಂತ್ರಿಕ ವಿಭಾಗದ ಹಸನ ಅಲಿ, ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್ ಚಂದ್ರಶೇಖರ, ಕಾರ್ಮಿಕ ಕಲ್ಯಾಣಾಧಿಕಾರಿ ರವಿ ಕುಮಾರ, ಲೆಕ್ಕ ಪತ್ರ ವಿಭಾಗದ ಅಧಿಕಾರಿ, ಉಗ್ರಾಣದ ಅಧಿಕಾರಿ ಮಹಾಂತೇಶ, ನಿರ್ವಾಹಕ ಅಣ್ಣಪ್ಪ ಸೇರಿದಂತೆ ಚಾಲಕರು ಸಿಬ್ಬಂದಿಗಳು ಪ್ರಯಾಣ ಕರು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ