ಎಸ್‌ಸಿಪಿ ಅನುದಾನ ದುರ್ಬಳಕೆಗೆ ಕಾರಣರಾದ ಸಾಮಾಜಿಕ ನ್ಯಾಯ ವಿರೋಧಿ, ಅಸಮರ್ಥ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹಾದೇವಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ರಾಯಚೂರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, “ಪರಿಶಿಷ್ಟ ಜಾತಿಗಳ ಬ್ಯಾಕ್‌ಲಾಗ್, ಸಾಮಾನ್ಯ ಹುದ್ದೆಗಳ ನೇಮಕಾತಿಗಳ ಬಗ್ಗೆ ಅಸಂಬದ್ಧ ಹೇಳಿಕೆ ನೀಡುತ್ತಿರುವ, ನ್ಯಾ. ನಾಗಮೋಹನ್‌ದಾಸ್ ಸಮಿತಿಯ ಆಯೋಗದ ಕಾರ್ಯಕ್ಕೆ ಹಿನ್ನಡೆಯಾಗುವಂತೆ ಮಾಡಿದ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಮತ್ತು ಪರಿಶಿಷ್ಟ ಜಾತಿಗಳ ಒಳಮೀಸಲಾತಿ, ಮಾದಿಗ ಸಂಘಟನೆಗಳ ನಿರಂತರ ಒತ್ತಡದಿಂದ, 4 ತಿಂಗಳ ತಡವಾಗಿವಲ್ಲದ ಮನಸ್ಸಿನಿಂದ, ಅನಿವಾರ್ಯವಾಗಿ 2024ರ ನವೆಂಬರತ್ 12ರಂದು ನ್ಯಾ.ನಾಗಮೋಹನದಾಸ್ ಏಕಸದಸ್ಯ ಪೀಠ ರಚನೆ ಮಾಡಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿ ವಿಚಾರಣೆ ಮಾಡಿ ಶಿಫಾರಸು ನೀಡಲು ತಮ್ಮ ಸರ್ಕಾರ ಆದೇಶ ನೀಡಿತ್ತು. ಆದರೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡದೆ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆಯೋಗದ ಕಾರ್ಯಗಳು ಪ್ರಾರಂಭಗೊಂಡು 2024 ರ ನ.13 ರಂದು ಸಮಾಜ ಕಲ್ಯಾಣ ಇಲಾಖೆಯ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಡಿ.ಪಿ.ಎ.ಆರ್) ಕರ್ನಾಟಕ ಸರ್ಕಾರ ಎಲ್ಲ ಇಲಾಖೆಗಳಿಗೆ ರವಾನಿಸುತ್ತ, ರಾಜ್ಯದ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಗಳನ್ನು ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಿದೆ. ಆದರೆ ರಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ವಿಶ್ವವಿದ್ಯಾಲಯಗಳು, ಸಹಕಾರಿ ಸಂಘಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭತಿ ಮಾಡದೇ ಇದ್ದರೆ ಇಲಾಖೆಯ ಮುಖ್ಯಸ್ಥರ ಹೆಸರನ್ನು ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ನಿಡಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹಾದೇವಪ್ಪ ತಿಳಿಸಿರುವುದು ಸರಿಯಲ್ಲ” ಎಂದರು.
“ಪರಿಶಿಷ್ಟ ಜಾತಿಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ, ನ್ಯಾ.ನಾಗಮೋಹನ್‌ದಾಸ್ ಆಯೋಗಕ್ಕೆ ಅಸಹಕಾರ ನೀಡಿದ ಅಧಿಕಾರಿಗಳೊಂದಿಗೆ ಮತ್ತು ಪರಿಶಿಷ್ಟ ಜಾತಿ/ಪಂಗಡ ಉಪಯೋಜನೆ ಹಣ ದುರ್ಬಳಕೆ ಕೃತ್ಯದಲ್ಲಿ ಶಾಮೀಲಾಗಿರುವ ಹೆಚ್ ಸಿ ಮಹದೇವಪ್ಪನವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ನ್ಯಾ.ನಾಗಮೋಹನ್‌ದಾಸ್ ಆಯೋಗಕ್ಕೆ ಅವಶ್ಯ ಮಾಹಿತಿ ನೀಡದೆ ಅಸಹಕಾರ, ನಿರ್ಲಕ್ಷ್ಯ ವಹಿಸಿದ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಪರಿಶಿಷ್ಟ ಜಾತಿಗಳ ಉಪ ಯೋಜನೆ ಹಣ ದುರ್ಬಳಕೆ ತಡೆಯಲು ಕಲಂ 7ಬಿ, 7ಸಿಗಳನ್ನು ರದ್ದುಗೊಳಿಸಬೇಕು. ಆದಿ ಕರ್ನಾಟಕ, ಆದಿ ದ್ರಾವೀಡ, ಆದಿ ಆಂಧ್ರ ಜಾತಿಗಳಿಗೆ ಹೊಲೆಯ, ಮಾದಿಗ ಎಂದು ನಿಖರ ಜನಸಂಖ್ಯೆ ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ/ಪಂಗಡ ಉಪಯೋಜನೆ ಹಣವನ್ನು ದುರ್ಬಳಕೆ ಮಾಡಿದ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಶೇಷ ತನಿಖೆಯನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಸಂಚಾಲಕ ಎಸ್ ಮಾರೆಪ್ಪ, ರಾಜ್ಯ ಸಂಚಾಲಕ ಹೇಮರಾಜ್ ಅಸ್ಕಿಹಾಳ, ಮಾದಿಗ ದಂಡೋರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಲು ಮರ್ಚಟಹಾಳ, ಸಮಾಜ ಪರಿವರ್ತನಾ ಸಂಘದ ಶ್ರೀನಿವಾಸ ಕೊಪ್ಪರ, ಕದಸಂಸ ಮುಖಂಡ ಎಂ ಈರಣ್ಣ, ಆರ್‌ಎಸ್‌ಪಿಎಸ್ ಮುಖಂಡ ಶರಣು, ಪ್ರಮುಖರಾದ ತಾಯಪ್ಪ ಗಧಾರ, ನರಸಿಂಹಲು, ಲಕ್ಷ್ಮಣ, ಉರುಕುಂದಪ್ಪ, ಎನ್ ಕೆ ಕೃಷ್ಣ, ಅನ್ವರ್ ಸೇರಿದಂತೆ ಇತರರು ಇದ್ದರು.
