ರಾಯಚೂರಿಗೆ ಏಮ್ಸ್ ಆಸ್ಪತ್ರೆ ಬೇಕೆಂದು ಜಿಲ್ಲೆಯ ಜನರು ಒತ್ತಾಯಿಸಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ, ಜಿಲ್ಲೆಯ ಒತ್ತಾಯಕ್ಕೆ ಸರ್ಕಾರಗಳು ಕಿವಿಗೊಡುತ್ತಿಲ್ಲ. ಇದೀಗ, ಜಿಲ್ಲೆಯ ಜನರು ಏಮ್ಸ್ ಜೊತೆಗೆ, ಈಗಿರುವ ಜಿಲ್ಲಾಸ್ಪತ್ರೆಯ ಉತ್ತಮ ನಿರ್ವಹಣೆಗಾಗಿಯೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಯಚೂರಿನಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಕೋತಿಗಳ ಉಪಠಳ ಹೆಚ್ಚಾಗಿದೆ. ಆಸ್ಪತ್ರೆಯ ವಾರ್ಡ್‌ಗಳಿಗೂ ನುಗ್ಗುವ ಕೋತಿಗಳು ರೋಗಿಗಳು ಮತ್ತು ಅವರ ಸಂಬಂಧಿಗಳಿಗೆ ತೊಂದರೆ ಕೊಡುತ್ತಿವೆ. ರೋಗಿಗಳಿಗೆ ನೀಡಲಾಗುವ ಊಟ ಮತ್ತು ಇನ್ನಿತರೆ ತಿನಿಸುಗಳನ್ನು ಹೊತ್ತೊಯ್ಯುತ್ತಿವೆ. ನೆಮ್ಮದಿಯಿಂದ ಕುಳಿತು ಊಟ ಮಾಡಲು, ತಿಂಡಿ ತಿನ್ನಲು ಬಿಡದೆ ಕಾಟ ಕೊಡುತ್ತಿವೆ ಎಂದು ರೋಗಿಗಳ ಪಾಲಕರು ಆರೋಪಿಸಿದ್ದಾರೆ.
“ಕೋತಿಗಳ ಕಾಟದಿಂದ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಪರಿಸ್ಥಿತಿ ಇಂದು-ನಿನ್ನೆಯದಲ್ಲ. ಹಲವು ತಿಂಗಳುಗಳಿಂದ ಕೋತಿಗಳ ಆಸ್ಪತ್ರೆ ಸುತ್ತ-ಮುತ್ತ ಬೀಡು ಬಿಟ್ಟಿವೆ. ಅವುಗಳನ್ನು ಓಡಿಸಲು ಆಗುತ್ತಿಲ್ಲ. ಓಡಿಸಲು ಮುಂದಾದರೆ, ನಮ್ಮ ಮೇಲೆಯೇ ಎಗರಿ ಹಲ್ಲೆ ಮಾಡುತ್ತವೆ” ಎಂದು ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೀದರ್ | ತಡವಾಗಿದ್ದಕ್ಕೆ ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ವ್ಯಕ್ತಿ
“ಕೋತಿಗಳ ಹಾವಳಿ ತಪ್ಪಿಸಲು ಪಟಾಕಿ ಸಿಡಿಸುತ್ತಿದ್ದೇವೆ. ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದೇವೆ. ಕೋತಿಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ಆಸ್ಪತ್ರೆಯ ಅಧೀಕ್ಷರು ಹೇಳಿದ್ದಾರೆ.