ದಲಿತರಿಗೆ ಸಾಮಾಜಿಕ ಆರ್ಥಿಕ, ರಾಜಕೀಯ ಸಮಾನತೆಗೆ ಸರ್ಕಾರಗಳು ಮುಂದಾಗಲಿ ಎಂದು ವಿಮಾ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಎಂ.ರವಿ ಒತ್ತಾಯಿಸಿದ್ದಾರೆ.
ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ದಲಿತ ಹಕ್ಕುಗಳ ಸಮಿತಿ ನಡೆಸಿದ ದಲಿತರ ಹಕ್ಕುಗಳ ಈಡೇರಿಕಾಗಿ ಆಯೋಜಿಸಿ ಸಹಿ ಸಂಗ್ರಹ ಚಳುವಳಿಯಲ್ಲಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷವಾದರೂ ದೇಶವು ಇಂದಿಗೂ ಅನಿಷ್ಠ ಜಾತಿ ಪದ್ಧತಿಯಿಂದ ಮುಕ್ತವಾಗಿಲ್ಲ. ವಿಶೇಷವಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಸಂವಿಧಾನಾತ್ಮಕ ಹಕ್ಕುಗಳು ಕಣ್ಮರೆಯಾಗುತ್ತಿವೆ. ಜಾತಿ-ತಾರತಮ್ಯ ಜಾತಿಭೇದವನ್ನು ವ್ಯವಸ್ಥಿತವಾಗಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಹಿಂದೂ ಧರ್ಮದ ಹೆಸರಿನಲ್ಲಿ ಅಸ್ಪೃಶ್ಯತೆಯನ್ನು ಜೀವಂತವಾಗಿ ಇಡಲಾಗುತ್ತಿದೆ. ದಲಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕನ್ನು ನಿರಾಕರಿಸಲಾಗುತ್ತಿದೆ. ಇವುಗಳ ವಿರುದ್ಧ ಡಿಎಸ್‌ಎಸ್, ದಲಿತ ಹಕ್ಕುಗಳ ಸಮಿತಿ, ಹಲವು ದಲಿತ ಪರ ಸಂಘಟನೆಗಳು, ಕೂಲಿಕಾರ, ರೈತ ಸಂಘಟನೆಗಳು ಸೇರಿ ದಲಿತರ ಸಾಮಾಜಿಕ ರಾಜಕೀಯ ಸಮಾನತೆಗಾಗಿ ಡಿ.04ರಂದು ಅಖಿಲ ಭಾರತ ಸಾಮಾವೇಶ ಮತ್ತು ನ.16ರಂದು ರಾಜ್ಯ ಮಟ್ಟದ ಸಮಾವೇಶಗಳನ್ನು ನಡೆಸುವ ಮೂಲಕ ಒಂದು ಕೋಟಿ ಸಹಿ ಸಂಗ್ರಹ ಮೂಲಕ ದೇಶದ ಸಾವಿರಾರು ಜನರನ್ನು ಚಳುವಳಿಗೆ ಇಳಿಸಲು ಮುಂದಾಗಿರುವುದು ಅಂತ್ಯಂತ ಒಳ್ಳೆಯ ಬೆಳೆವಣಿಗೆ ಎಂದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಜಿ. ವಿರೇಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಶರಣಬಸವ ಮತ್ತು ನವರತ್ನ ಯುವಕ ಸಂಘಟನೆಯ ಮುಖಂಡ ಕೆ.ಪಿ.ಅನೀಲ್ ಕುಮಾರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಎಚ್.ಪದ್ಮಾ ಪ್ರಾಸ್ತವಿಕವಾಗಿ ಮಾತನಾಡಿದರು.
ಈಶ್ವರಮ್ಮ, ಮಾರುತಿ, ಪಾರ್ವತಿ, ಆಶಾ ಸೇರಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಿ ಸಂಗ್ರಹ ಚಳುವಳಿಯ ಭಾಗವಾಗಿ ಸುಮಾರು 400ಕ್ಕೂ ಹೆಚ್ಚು ಸಹಿ ಮನೆಮನೆಗಳಿಗೆ ತೆರಳಿ ಸಂಗ್ರಹ ಮಾಡಲಿದ್ದಾರೆ.